
ಮಂಗಳೂರು: ಕುಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರೌಡಿಶೀಟರ್ ಆಯ್ಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ,ಈ ಕುರಿತು ಮಾತನಾಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ನಾನು ರೌಡಿಶೀಟರ್ ಅಲ್ಲ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಯಾವುದೇ ಹಣವನ್ನು ಬಾಕಿ ಇರಿಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
25 ವರ್ಷಗಳ ಹಿಂದೆ ಅಂಗಡಿ ಗುತ್ತಿಗೆ ಪಡೆದ ವೇಳೆ ದೇವಸ್ಥಾನಕ್ಕೆ ಹಣ ನೀಡಲು ಬಾಕಿ ಇತ್ತು. ಆ ಬಳಿಕ ನನ್ನ ಮೇಲೆ ಚೆಕ್ ಬೌನ್ಸ್ ಪ್ರಕರಣ ಕೂಡ ದಾಖಲಾಗಿತ್ತು. ನನ್ನ ತಪ್ಪನ್ನು ಅರಿತು ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಬಾಕಿ ಕ್ಲೀಯರ್ ಮಾಡಿದ್ದೇನೆ.
ರಾಜಕೀಯ ಷಡ್ಯಂತ್ರದಿಂದ ಆಗ ನನ್ನ ಮೇಲೆ ಸುಳ್ಯ ಇನ್ಸ್ಪೆಕ್ಟರ್ ರೌಡಿಶೀಟ್ ಓಪನ್ ಮಾಡಿದ್ದರು. ಆದರೆ 15 ವರ್ಷಗಳ ಹಿಂದೆ ನನ್ನ ಸನ್ನಡತೆ ಗಮನಿಸಿ ರೌಡಿಶೀಟ್ ರದ್ದು ಮಾಡಲಾಗಿದೆ. ಇದಾದ ಬಳಿಕ ನಾನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗೌರವಯುತವಾಗಿ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.