
ಬೆಂಗಳೂರು: ಗೃಹ ಸಚಿವ ಡಾ. ಜಿ ಪರಮೇಶ್ವರ್ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಂದ ಹಿಡಿದು ವಿಪಕ್ಷಗಳು ಕೂಡ ಎಸ್ಐಟಿ ತನಿಖೆಯನ್ನು ಸ್ವಾಗತಿಸಿದ್ದು ಈಗಾಗಲೇ ತನಿಖೆ ನಡೆಯುತ್ತಿದೆ. ಹೀಗಾಗಿ ಈ ಪ್ರಕರಣವನ್ನು ಎನ್ಐಎ ಸಹಿತ ಬೇರೆ ಯಾವುದೇ ತನಿಖೆ ವಹಿಸುವ ಯೋಚನೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ತನಿಖೆ ಯಾವಾಗ ಮುಗಿಯುತ್ತದೆ ಎಂಬುದನ್ನು ನಾವು ಯಾರು ಹೇಳಲು ಸಾಧ್ಯವಿಲ್ಲ. ಆದಷ್ಟು ಬೇಗ ವರದಿ ಕೊಡಿ ಎಂದಿದ್ದೇವೆ. ಅಷ್ಟೊಂದು ಮಾತ್ರ ಹೇಳಬಹುದು. ಯಾವುದೇ ತನಿಖೆ ಹೀಗೆ ಆಗಬೇಕು ಎನ್ನಲು ಸಾಧ್ಯವಿಲ್ಲ. ಗಡುಗು ವಿಧಿಸಲು ಆಗುವುದಿಲ್ಲ. ನಿರ್ದೇಶನಗಳನ್ನು ಕೊಡಲು ಬರುವುದಿಲ್ಲ. ನಾವು ಕೊಡುವುದು ಇಲ್ಲ. ಯಾರನ್ನು ವಶಕ್ಕೆ ಪಡೆಯಬೇಕು? ಯಾರನ್ನು ವಿಚಾರಣೆ ಮಾಡಬೇಕು? ಯಾವಾಗ ಹೇಗೆ ಎಲ್ಲಿ ವಿಚಾರಣೆ ಮಾಡಬೇಕು? ಬಂಧಿಸಬೇಕು ಬೇಡವೋ? ಹೀಗೆ ಎಲ್ಲವನ್ನು ತನಿಖಾ ಅಧಿಕಾರಿಗಳು ನಿರ್ಧರಿಸಲಿದ್ದು ಆರೋಪಿಗೆ ಆಶ್ರಯ ಕೊಟ್ಟವರನ್ನು ವಶಕ್ಕೆ ಪಡೆದಿಲ್ಲ ಎಂದರೆ ಎಸ್ಐಟಿ ಅದನ್ನು ನಿರ್ಧರಿಸುತ್ತದೆ ಎಂದು ಹೇಳಿದರು.
ಈಗಾಗಲೇ ಅವರಿಗೆ ಸಿಕ್ಕಿರುವ ಕೆಲವು ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಅಲ್ಲಿ ಅದರ ವಿಶ್ಲೇಷಣೆ ಆಗಿ ವರದಿ ಬರಬೇಕು. ತನಿಖೆ ಮುಗಿಯುವವರೆಗೆ ನಮಗೆ ಅವರು ಯಾವ ವಿಷಯಗಳನ್ನು ಹೇಳುವಂತಿಲ್ಲ, ನಾವೂ ಕೇಳುವಂತಿಲ್ಲ ಎಂದು ಸ್ಪಷ್ಟಪಡಿಸಿದರು.