
ಬೆಂಗಳೂರು : ಕಾಂತಾರ ಚಾಪ್ಟರ್–1 ಸಿನಿಮಾದ ದೈವಪಾತ್ರಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಕ್ಷಮೆಯಾಚನೆ ಸಲ್ಲಿಸಿ ಪ್ರಮಾಣಪತ್ರ ನೀಡುವುದರ ಜೊತೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲು ಸಮ್ಮತಿಸಿದ್ದಾರೆ ಎಂದು ಅವರ ಪರ ಹಿರಿಯ ವಕೀಲ ಸಜನ್ ಪೂವಯ್ಯ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಈ ಸಂಬಂಧ, ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್ ಠಾಣೆ ಪೊಲೀಸರ ಎಫ್‌ಐಆರ್ ಅನ್ನು ರದ್ದುಪಡಿಸಲು ರಣವೀರ್ ಸಿಂಗ್ ಸಲ್ಲಿಸಿದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಂಗಳವಾರ ವಿಚಾರಣೆ ನಡೆಸಿದ್ದು ಈ ವೇಳೆ ದೂರುದಾರರ ಪರ ವಕೀಲ ಸಿಜಿ ಮಲಯಾಳಿ ಅವರು, ರಣವೀರ್ ಸಿಂಗ್ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದ್ದರೂ ಅದು ನಿಜವಾದ ಪಶ್ಚಾತ್ತಾಪದ ಪ್ರತಿಬಿಂಬವಲ್ಲ ಎಂದು ವಾದಿಸಿದರು. ಆ ಪೋಸ್ಟ್ ಅವರ ಮ್ಯಾನೇಜರ್ ಪ್ರಕಟಿಸಿದ್ದಾಗಿದೆ ಎಂದು ಆರೋಪಿಸಿದರು. ಚಾಮುಂಡಿ ದೈವವನ್ನು “ಹೆಣ್ಣು ದೆವ್ವ” ಎಂದು ಅವಹೇಳನ ಮಾಡಿದ ಹಿನ್ನೆಲೆಯಲ್ಲಿ, ದೇವಸ್ಥಾನಕ್ಕೆ ತೆರಳಿ ಸ್ವತಃ ಕ್ಷಮೆ ಕೋರುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಅರ್ಜಿದಾರರು ಈಗಾಗಲೇ ಪ್ರಮಾಣಪತ್ರದ ಮೂಲಕ ಕ್ಷಮೆಯಾಚನೆ ಸಲ್ಲಿಸಲು ಮುಂದಾಗಿರುವುದನ್ನು ಉಲ್ಲೇಖಿಸಿ, ಇನ್ನಷ್ಟು ಏನು ಬೇಕು ಎಂದು ಪ್ರಶ್ನಿಸಿತು. ಅವರ ನಡೆ ಸರಿಯಲ್ಲವೆಂದರೂ, ಪಶ್ಚಾತ್ತಾಪದ ಸಂಕೇತವಾಗಿ ದೇವಾಲಯಕ್ಕೆ ಭೇಟಿ ನೀಡುವುದು ಸೂಕ್ತವೆಂದು ಅಭಿಪ್ರಾಯಪಟ್ಟಿತು. ಈ ವೇಳೆ ರಣವೀರ್ ಪರ ವಕೀಲ ಸಜನ್ ಪೂವಯ್ಯ ಅವರು, ಕ್ಷಮೆಯಾಚನೆ ಸಲ್ಲಿಸಲಾಗಿದೆ ಹಾಗೂ ದೇವಸ್ಥಾನ ಭೇಟಿ ದಿನಾಂಕವನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುತ್ತದೆ ಎಂದು ತಿಳಿಸಿದ್ದು ನಂತರ ನ್ಯಾಯಾಲಯ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿತು.






















































