
ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಧ್ಯಪ್ರದೇಶದಲ್ಲಿ ಕಲುಷಿತ ಕೆಮ್ಮಿನ ಸಿರಪ್ಗಳಿಂದ 20 ಮಕ್ಕಳ ಸಾವನ್ನಪ್ಪಿದ ಪ್ರಕರಣದಿಂದ ಎಚ್ಚೆತ್ತುಕೊಂಡ ದೇಶದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್ಸಿಒ), ಎಲ್ಲ ರಾಜ್ಯಗಳಲ್ಲಿನ ಕೆಮ್ಮಿನ ಔಷಧಗಳ ಸಮಗ್ರ ತಪಾಸಣೆ ನಡೆಸಬೇಕು ಎಂದು ಸೂಚಿಸಿದೆ.
‘ಪ್ರತಿ ಬ್ಯಾಚ್ ಕಚ್ಚಾ ವಸ್ತು ಮತ್ತು ಸಿದ್ದಪಡಿಸಿದ ಸೂತ್ರೀಕರಣವನ್ನು (ಫಾರ್ಮುಲೇಶನ್) ಬಳಕೆ ಅಥವಾ ಮಾರಾಟ ಮಾಡುವ ಮೊದಲು ಸರಿಯಾಗಿ ಪರೀಕ್ಷಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ರಾಜ್ಯ ಔಷಧ ನಿಯಂತ್ರಕರು ತಪಾಸಣೆ ತೀವ್ರಗೊಳಿಸಬೇಕು ಮತ್ತು ಸರಿಯಾದ ಪರೀಕ್ಷೆಯಿಲ್ಲದೆ ಯಾವುದೇ ಬ್ಯಾಚ್ ಔಷಧ ಬಿಡುಗಡೆ ಅಗದಂತೆ ನೋಡಿಕೊಳ್ಳಬೇಕು’ ಎಂದು ಪತ್ರದಲ್ಲಿ ತಾಕೀತು ಮಾಡಿದೆ.






















































