
ಹುಬ್ಬಳ್ಳಿ: ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯಡಿ ವಿವಿಧ ದೇವಸ್ಥಾನಗಳ ಪ್ರಸಾದವನ್ನು ಅಂಚೆ ಮೂಲಕ ಮನೆ ಬಾಗಿಲಿಗೆ ತಲುಪಿಸುವ ಅವಕಾಶ ಕಲ್ಪಿಸಿದ್ದು ಇದೀಗ ‘ಇ-ಪ್ರಸಾದ’ದಡಿ ‘ಮದುವೆ ಆಶೀರ್ವಾದ’ ಪ್ರಸಾದವನ್ನು ಪಡೆಯುವ ಅವಕಾಶ ಒದಗಿಸಿದೆ.
ಸಾಮಾನ್ಯವಾಗಿ ಜನರು ಮದುವೆ ಸಂದರ್ಭ ಮದುವೆ ಆಮಂತ್ರಣ ಪತ್ರಿಕೆಗಳನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ದೇವರ ಮುಂದೆ ಇರಿಸಿ ಪೂಜೆ ಮಾಡಿಸುವುದು ವಾಡಿಕೆ. ಇದೀಗ ಸರ್ಕಾರವು ದೇವಸ್ಥಾನಕ್ಕೆ ಹೋಗದೆ ತಮ್ಮ ಮದುವೆ ಆಹ್ವಾನ ಕಾರ್ಡುಗಳಿಗೆ ಪೂಜೆ ಮಾಡಿಸಬಹುದು. ‘ಇ-ಪ್ರಸಾದ ಸಿಎಸ್ಸಿ ದೇವಾಲಯ ಡಾಟ್ ಕಾಮ್’ ಮೂಲಕ ಮದುವೆ ಆಹ್ವಾನ ಕಾರ್ಡನ್ನು ದೇವಸ್ಥಾನಗಳಿಗೆ ಕಳುಹಿಸಿ ಪೂಜೆ ಸಲ್ಲಿಸುವಂತೆ ಮಾಡಬಹುದಾಗಿದ್ದು ಪೂಜೆ ಸಲ್ಲಿಸಿ ಆಶೀರ್ವಾದ ರೂಪದಲ್ಲಿ ಕುಂಕುಮ, ದೇವರ ಬಳಿ ಪೂಜಿಸಿದ ದಾರ ಹಾಗೂ ಪ್ರಸಾದವನ್ನು ಮನೆಗೆ ಕಳುಹಿಸಿಕೊಡಲಾಗುತ್ತದೆ.
ಆರಂಭದಲ್ಲಿ ‘ಇ- ಪ್ರಸಾದ’ ಸೇವೆಗೆ ಸವದತ್ತಿ ಎಲ್ಲಮ್ಮ, ಹುಲಗಿ ಹುಲಿಗೆಮ್ಮ, ಕೊಲ್ಲೂರು ಮೂಕಾಂಬಿಕೆ, ಕುಕ್ಕೆ ಸುಬ್ರಹ್ಮಣ್ಯ, ಗಾಣಗಾಪುರ ದತ್ತಾತ್ರೇಯ, ನಂಜನಗೂಡು ನಂಜುಂಡೇಶ್ವರ, ಗುಡ್ಡಾಪುರ ದಾನಮ್ಮದೇವಿ, ಬೆಂಗಳೂರಿನ ಬನಶಂಕರಿ, ಕೆಂಗಲ್ ಆಂಜನೇಯ, ಮೈಲಾರಲಿಂಗೇಶ್ವರ ಸೇರಿದಂತೆ ಸುಮಾರು 14 ದೇವಸ್ಥಾನಗಳಲ್ಲಿ ಚಾಲನೆ ದೊರೆತಿದ್ದು ಬಳಿಕ ಬೇಡಿಕೆ ಹೆಚ್ಚಾದಂತೆ ಇನ್ನೂ 10 ದೇವಸ್ಥಾನಗಳಲ್ಲಿ ಈ ಸೇವೆ ಆರಂಭಿಸಲಾಗಿದೆ.











