ನಾಲ್ವರು ಸಾವನ್ನಪ್ಪಿದ್ದು 25 ಮಂದಿಗೂ ಹೆಚ್ಚು ಜನರಿಗೆ ಗಾಯ

ನವದೆಹಲಿ: ಇಂದು ಬೆಳಿಗ್ಗೆ ಮಥುರಾದ ದೆಹಲಿ-ಆಗ್ರಾ ಎಕ್ಸ್ಪ್ರೆಸ್ ವೇಯಲ್ಲಿ ದಟ್ಟ ಮಂಜು ಕವಿದ ವಾತಾವರಣದಿಂದಾಗಿ ಮಂದ ಗೋಚರತೆಯ ಪರಿಣಾಮ ಏಳು ಬಸ್ಗಳು ಮತ್ತು ಮೂರು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದ್ದು ಪರಿಣಾಮ ನಾಲ್ವರು ಸಾವನ್ನಪ್ಪಿದ್ದು 25 ಮಂದಿಗೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಡಿಕ್ಕಿಯ ನಂತರ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿದ್ದು ಅಪಘಾತಕ್ಕೆ ಸಂಬಂಧಪಟ್ಟಂತೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ಈ ಕುರಿತು ಮಾಹಿತಿ ನೀಡಿ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆಗಳು ಮುಂದುವರೆದಿದೆ. ನಿರ್ಬಂಧಿಸಲಾದ ಹೆದ್ದಾರಿಯನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಹೇಳಿದ್ದಾರೆ.





