
ಬೆಳಗಾವಿ: ಕಳೆದ 10 ದಿನದ ಹಿಂದಷ್ಟೇ ಕೋಡಿಮಠ ಶ್ರೀಗಳು ಬೆಳಗಾವಿಯಲ್ಲಿ ಮಾತನಾಡಿ ”ವಾಯುಗಂಡ” ಇದ್ದು, ವಾಯುನಿಂದ ದೇಶದಲ್ಲಿ ದೊಡ್ಡ ಅನಾಹುತ ಸಂಭವಿಸಿ ಅತಿಹೆಚ್ಚು ಸಾವು ನೋವು ಆಗಲಿದೆ ಎಂದು ಎಚ್ಚರಿಸಿದ್ದು ಇದೀಗ ನಿಜವಾಗಿದೆ.
ದೇಶದಲ್ಲಿ ಸಂಭವಿಸಿದ ದುರಂತಗಳ ಕುರಿತು ಈ ಮೊದಲೇ ಸ್ವಾಮೀಜಿಗಳು ನುಡಿದಿದ್ದು ಅವರು ಹೇಳಿದಂತೆ ರಾಜ್ಯದಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಹಾಗೂ ಅಹಮದಾಬಾದ್‌ನಲ್ಲಿ ವಿಮಾನ ದುರ್ಘಟನೆ ಆಗಿ ಅಪಾರ ಸಾವುನೋವಾಗಿದೆ.
ಇನ್ನು ಏ.20ರಂದು ಬೆಂಕಿ ಕೆಂಡದ ಮೇಲೆ ನಡೆದು ಕಾಲಜ್ಞಾನ ನುಡಿದಿದ್ದ ಬೈಲಹೊಂಗಲ ತಾಲೂಕಿನ ನಯಾನಗರ ಸುಖದೇವಾನಂದ ಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ‘ಉಕ್ಕಿನ ಹಕ್ಕಿಗೆ ಪೆಟ್ಟು ಬೀಳ್ತೈತಪ್ಪ‘ ಎಂದಿದ್ದರು. ವಿಮಾನಕ್ಕೆ ಉಕ್ಕಿನ ಹಕ್ಕಿ ಎಂದು ಸಹ ಕರೆಯಲಾಗುತ್ತದೆ. ಇವರ ಭವಿಷ್ಯವಾಣಿ ನಿಜವಾಗಿದ್ದು, ಜೂ.12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನಕ್ಕೆ ಪೆಟ್ಟು ಬಿದ್ದು, 241ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಬಾಗಲಕೋಟೆಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಮ್ಮೆ ಭವಿಷ್ಯ ನುಡಿದಿದ್ದು ಸದ್ಯದಲ್ಲಿ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಂಕ್ರಾಂತಿವರೆಗೂ ರಾಜ್ಯ ರಾಜಕೀಯದಲ್ಲಿ ಏನೂ ಬದಲಾವಣೆ ಆಗೋದಿಲ್ಲ ಎಂದಿದ್ದಾರೆ. ಪಹಲ್ಗಾಮ್ ದಾಳಿ ವಿಚಾರವಾಗಿ ಮಾತನಾಡಿದ ಅವರು, ಯುಗಾದಿ ಸಮಯದ ಭವಿಷ್ಯದಲ್ಲಿ ನಾವು ಹೇಳಿದ್ದೆವು. ಉತ್ತರದ ನಾಡಿನಲ್ಲಿ ಹಗೆಯ ಹೆಬ್ಬೇಗೆ ಹಬ್ಬೀತು, ಹುಟ್ಟೀತು. ಸುತ್ತುವರೆದು ಬರುವಾಗ ಜಗವೆಲ್ಲ ಕೋಳಾದೀತು ಸಾಮೂಹಿಕ ಹತ್ಯೆಯಾಗುತ್ತದೆ ಅಂತ ಹೇಳಿದ್ದರು. ಅದು ಹೇಳಿದ ಕೆಲ ದಿನಗಳಲ್ಲಿ ಕಾಶ್ಮೀರದಲ್ಲಿ ಉಗ್ರವಾದಿಗಳಿಂದ ಭೀಕರ ಹತ್ಯೆ ನಡೆಯಿತು.
ಮತಾಂಧತೆ ಹೆಚ್ಚಾಗಲಿದೆ, ದೊಡ್ಡ ಕಾಯಿಲೆ ಬರುತ್ತೆ ಅದು ಐದು ವರ್ಷ ಇರುತ್ತೆ. ಶಾಂತಿ ಇಲ್ಲ, ನೆಮ್ಮದಿ ಇಲ್ಲ ಎಂದಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಉತ್ತರಿಸಿದ್ದಾರೆ.
ಪ್ರಳಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಈ ವರ್ಷ ವಾಯು ಸುನಾಮಿ, ಜಲ ಸುನಾಮಿ, ಭೂ ಸುನಾಮಿ, ಅಗ್ನಿ ಸುನಾಮಿ ಉಂಟಾಗುತ್ತದೆ. ಹಿಮಾಲಯ ಗೌರಿಶಂಕರ ಶಿಖರ ಶಿವ ಶಿವ ಎಂದೀತು. ಹಿಮಾಲಯದಲ್ಲಿ ಸುನಾಮಿ ಆದೀತು ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ. ಹಿಮಾಲಯ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ, ಜಲಬಾಧೆ ಇದೆ. ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಜಗತ್ತಿನ ಎರಡ್ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ



















