✍️.. ಶೈಲೇಶ್ ಶೆಟ್ಟಿ ಬೈಲೂರು

“ಪರ್ಬೊಡು ಮಲ್ಲ ಪರ್ಬ ದಿಪೂಲಿ ಪರ್ಬ” ಎಂಬ ತುಳುನಾಡಿನ ನುಡಿಗಟ್ಟು, ದೀಪಾವಳಿಯ ವಿಶಿಷ್ಟತೆಯನ್ನು ಸೊಗಸಾಗಿ ಸಾರುತ್ತದೆ. ವಿಶೇಷವಾಗಿ ಕೃಷಿ ಪ್ರಧಾನ ಕುಟುಂಬಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ಹೊಲದಲ್ಲಿ ಬೆಳೆದ ಬೆಳೆಯ ಕೊಯ್ಲಿನ ನಂತರದ ವಿಶ್ರಾಂತಿಯ ಸಮಯವಿದು. ಬೆವರಿನಿಂದ ನೆನೆಸಿದ ಶ್ರಮದ ಫಲವನ್ನು ದೇವರಿಗೆ ಸಮರ್ಪಿಸಿ, ಕುಟುಂಬದ ಜೊತೆ ಹಂಚಿಕೊಳ್ಳುವ ಆ ಸಂತೋಷವೇ ದೀಪಾವಳಿ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನದ ಜ್ಯೋತಿ ಬೆಳಗಿಸಿ ಸಂಪತ್ತು, ಸಮೃದ್ಧಿಯ ಸಂಕೇತವಾದ ದೀಪಾವಳಿ ಹಬ್ಬವು ನಮ್ಮ ಜೀವನದ ಅನೇಕ ಅಂಶಗಳನ್ನು ಸ್ಪರ್ಶಿಸುತ್ತದೆ. ಇದು ಕೇವಲ ಬೆಳಕುಗಳ ಹಬ್ಬವಲ್ಲ, ಹಳೆಯ ನೆನಪುಗಳನ್ನು ಪುನರುಜ್ಜೀವನಗೊಳಿಸುವ ಒಂದು ಭಾವನಾತ್ಮಕ ಕ್ಷಣವೂ ಹೌದು.
ಕೃಷಿಯಲ್ಲೇ ಖುಷಿ ಕಾಣುವ ಶ್ರಮಜೀವಿಗಳು. ತಮ್ಮ ಮಕ್ಕಳ ಏಳಿಗಾಗಿಯೇ ದುಡಿದು ಜೀವ ತೇಯುವ, ಅವರ ಸುಖಕ್ಕಾಗಿಯೇ ಜೀವನದ ಸರ್ವವನ್ನೂ ಮುಡಿಪಾಗಿಟ್ಟ ಹೆತ್ತವರೇ ನಮ್ಮ ಹೀರೋಗಳು. ಬಾಗಿದ ಬೆನ್ನು, ಶಕ್ತಿ ಕಳೆದುಕೊಂಡಿರುವ ಕಾಲುಗಳು, ಸುಕ್ಕಾಗಿರುವ ಕೈಗಳು ಮಕ್ಕಳ ಭವಿಷ್ಯ ಭದ್ರವಾಗಿಸುವ ಏಕೈಕ ಉದ್ದೇಶದಿಂದ ಕಷ್ಟವನ್ನು ಹೊತ್ತುಕೊಂಡು ತಮ್ಮ ಆಕಾಂಕ್ಷೆಗಳನ್ನು ಬದಿಗಿಟ್ಟು ದುಡಿವವರಿವರು.
ತಂದೆ ತಾಯಿ ನಮ್ಮ ಬದುಕು ರೂಪಿಸಿರುವ ದೇವರಾದರೆ, ಅಜ್ಜ-ಅಜ್ಜಿ ನಮ್ಮ ಪರಂಪರೆಯ ಕಂಬಗಳು. ತಂದೆ-ತಾಯಿ, ಅಜ್ಜ-ಅಜ್ಜಿ ಮತ್ತು ಹಿರಿಯರ ತ್ಯಾಗದ ಫಲವಾಗಿ ನಾವಿಂದು ಎದ್ದು ನಿಂತಿದ್ದೇವೆ. ಆದರೆ, ನಾವು ಕೆಲಸಕ್ಕೆ ಬಾರದ ಸಿನಿಮಾ ತಾರೆಯರನ್ನು ಹೀರೋಗಳಾಗಿ ನೋಡುತ್ತೇವೆ. ಪರದೆ ಮೇಲಿನ ಕಲ್ಪಿತ ನೋವಿಗೆ ಕರುಣೆ ತೋರಿಸುತ್ತೇವೆ. ಧಾರವಾಹಿ ಪಾತ್ರಗಳಲ್ಲಿ ತಂದೆ ಕಷ್ಟಪಟ್ಟರೆ, ತಾಯಿ ಆಳುತ್ತಿದ್ದರೆ ನಾವು ಕಣ್ಣೀರಿಡುತ್ತೇವೆ. ದುಃಖಿಸುತ್ತೇವೆ. ಆಟಗಾರರ ಸಾಧನೆಗೆ ಚಪ್ಪಾಳೆ ತಟ್ಟುತ್ತೇವೆ. ಆದರೆ, ನಮಗೆ ಜೀವನ ಕಟ್ಟಿಕೊಟ್ಟಿರುವಂತಹ ತಂದೆಯ ದುಡಿತ, ತಾಯಿಯ ತ್ಯಾಗ ಮರೆತು ಬಿಡುತ್ತೇವೆ. ಅಸಲಿ ಬದುಕಿನ ನೋವಿಗಿಂತ ಕಲ್ಪನೆಯ ನೋವಿಗೆ ಹೆಚ್ಚು ಪ್ರತಿಕ್ರಿಯಿಸುತ್ತೇವೆ. ನಮ್ಮ ಜೀವನದ ನಿಜವಾದ ಹೀರೋಗಳು ನಮ್ಮ ಮನೆಯೊಳಗೆ ಇದ್ದಾರೆ. ಮುಂಜಾನೆ ಏಳುವ ತಾಯಿ ಕುಟುಂಬದವರ ಹಸಿವು ನೀಗಿಸುವ ಕಾರ್ಯದಲ್ಲಿ ಮಗ್ನಳಾಗುತ್ತಾಳೆ. ತಂದೆ ಕೃಷಿ ಕಾಯಕದಲ್ಲೇ ಸಮಯ ಸವೆಸುತ್ತಾರೆ. ಇವರ ಕೆಲಸ ಕಾರ್ಯ ನಮಗೆ ಕಾಣಿಸುವುದೇ ಇಲ್ಲ.
ಪ್ರತಿ ತಂದೆ ತಾಯಿಯ ಕಣ್ಣುಗಳಲ್ಲಿ ಹೊಳೆಯುತ್ತಿರುವ ಕನಸು ಒಂದೇ. “ನಮ್ಮ ಮಕ್ಕಳು ಉತ್ತಮ ಜೀವನ ನಡೆಸಬೇಕು” ಎಂಬುದು. ನೀವೊಮ್ಮೆ ನಿಮ್ಮ ಮನೆಯ ಹಿರಿಯರನ್ನು, ಅಪ್ಪ-ಅಮ್ಮನ ಬಗ್ಗೆ ಒಂದೈದು ನಿಮಿಷ ಯೋಚಿಸಿ ನೋಡಿ. ನಾವು ನೋಡದ, ಯಾರು ಮೆಚ್ಚದ, ಯಾವ ಪ್ರಶಸ್ತಿ ಅಥವಾ ಪ್ರಶಂಸೆಗೂ ನಿಲುಕದ ಅವರ ತ್ಯಾಗ ಕಣ್ಣೆದುರು ತೆರೆದುಕೊಳ್ಳುತ್ತದೆ. ಆದರೆ ಅವರ ಇಚ್ಛೆ, ಇಷ್ಟಾರ್ಥ ನಮಗೆ ನಮ್ಮ ಅರಿವಿಗೆ ಬರುವುದೇ ? ಅವರಿಗೆ ಬೇಕಿರುವುದು ನಮ್ಮಿಂದ ಪ್ರೀತಿಯ ಮಾತು, ಕಾಳಜಿ, ಸ್ವಲ್ಪ ಸಮಯ ಮತ್ತು ಗೌರವ. ಅವರ ಕೈ ಹಿಡಿದು ಮಾತನಾಡಿದರೆ ಅವರಿಗೆ ಆಕಾಶವನ್ನೇ ಕೊಟ್ಟಂತೆ. ಪ್ರೀತಿ ಹಂಚಿದಾಗ ಕುಟುಂಬ ಬಲವಾಗುತ್ತದೆ.
ನನ್ನ ಅಮ್ಮ ನನಗೆ “ಒಂದು ಸೀರೆ ತಂದು ಕೊಡು” ಎಂದು ಜೀವಮಾನದಲ್ಲೇ ಕೇಳಿದವಳಲ್ಲ. ನಾನಾಗಿಯೇ ಖರ್ಚಿಗೆ ಇರಲಮ್ಮ ಎಂದು ಒಂದಿಷ್ಟು ದುಡ್ಡು ನೀಡಿದರೆ ನನಗೆ ಯಾಕೆ ? ನಿನಗಿರಲಿ ಮಗ.. ಎಂದವಳು ಆಕೆ. ಇಂಥದ್ದೇಕೆ ನಮ್ಮ ಹೃದಯ ತಟ್ಟುವುದಿಲ್ಲ ? ಸಂಸಾರದ ಹೊಣೆಗಾರಿಕೆ, ಮಕ್ಕಳ ಸೇವೆ, ಮನೆಯ ಖರ್ಚು ವೆಚ್ಚ ಎಲ್ಲವನ್ನೂ ಸರಿದೂಗಿಸುವಲ್ಲಿ ಅವರ ಜೀವನವೇ ಕಳೆದುಹೋಗುತ್ತದೆ. ನಮ್ಮ ಸುಖಕ್ಕಾಗಿ ಅಂದು ತಮ್ಮ ಯೌವ್ವನವನ್ನು ತ್ಯಾಗ ಮಾಡಿದವರ ಕೈಗಳು ಇಂದು ದುರ್ಬಲವಾಗಿರಬಹುದು. ಹೆಜ್ಜೆಗಳು ನಿಧಾನವಾಗಿರಬಹುದು, ಆದರೆ ಅವರ ಹೃದಯದಲ್ಲಿ ನಮ್ಮ ಮೇಲಿನ ಪ್ರೀತಿ ಮಾಸದೇ ಹಾಗೆಯೇ ಹಸಿರಾಗಿದೆ. ಹೆತ್ತವರ ನೋವಿಗೆ ಕಿವಿಯಾಗೋಣ, ಮಾತುಗಳಿಗೆ ಸ್ಪಂದಿಸೋಣ, ಸಾಧ್ಯವಾದಷ್ಟು ಅವರ ಸೇವೆಯಲ್ಲಿ ಕೈಜೋಡಿಸೋಣ. ಅವರ ಬೇಕು ಬೇಡಗಳಿಗೆ ಸ್ಪಂದಿಸೋಣ. ಹೆತ್ತವರನ್ನು ಹಿರಿಯರನ್ನು ಗೌರವಿಸುವುದು ಕೇವಲ ಕರ್ತವ್ಯವಲ್ಲ. ಅವರ ಜೀವನದ ಕೊನೆಯ ಘಳಿಗೆಯನ್ನು ಸುಖಕರವಾಗಿಸಲು ಕೊಡಬಹುದಾದ ಅತ್ಯುತ್ತಮ ಕಾಣಿಕೆ. ಕಾಲ ಬದಲಾಗಿದರೂ ಹಬ್ಬದ ಮೌಲ್ಯ ಬದಲಾಗಿಲ್ಲ. “ಅಂಧಕಾರ ಎಷ್ಟೇ ಇರಲಿ, ಬೆಳಕು ಹಚ್ಚಿದರೆ ಅದು ಅಳಿದುಹೋಗುತ್ತದೆ.” ಇಂದು ನಾವು ಬೆಳಕು ಹಚ್ಚುವಾಗ, ಕೇವಲ ಮನೆಯನ್ನು ಬೆಳಗಿಸದೆ ನಮ್ಮ ಹೃದಯದಲ್ಲಿಯೂ ಮಾನವೀಯತೆಯ ಜ್ಯೋತಿ ಬೆಳಗಿಸೋಣ. ಹೆತ್ತವರ ಆಶೀರ್ವಾದ, ಪ್ರಕೃತಿಯ ಕೃಪೆ, ಮತ್ತು ಶ್ರಮಜೀವಿಗಳ ಹೋರಾಟಕ್ಕೆ ಕೃತಜ್ಞತೆಯ ಬೆಳಕು ಹಚ್ಚೋಣ ಶುಭವಾಗಲಿ.ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.











