
ಪ್ರಯಾಗ್ ರಾಜ್: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು ಕೋಟಿ ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇದೀಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಮಹಾಕುಂಭಮೇಳದ ಸಮಯದಲ್ಲಿ ತ್ರಿವೇಣಿ ಸಂಗಮದ ನೀರಿನ ಗುಣಮಟ್ಟವು ಸ್ನಾನಕ್ಕೂ ಯೋಗ್ಯವಲ್ಲದ ರೀತಿಯಲ್ಲಿ ಮಲಿನವಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ವರದಿ ಮಾಡಿದೆ.
ಎನ್‌ಜಿಟಿಯು ಪ್ರಯಾಗ್ ರಾಜ್ ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸ್ನಾನ ಮಾಡುವುದರಿಂದ ನೀರಿನಲ್ಲಿ ಮಲದ ಪ್ರಮಾಣ ಹೆಚ್ಚಾಗಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಸಿಪಿಸಿಬಿ ಮಾನದಂಡಗಳು 100 ಮಿಲಿಯನ್ ನೀರಿನಲ್ಲಿ 2500 ಯೂನಿಟ್ ಫೆಕಲ್ ಕೋಲಿಫಾರ್ಮ್ ಅನ್ನು ಅನುಮತಿಸುವ ಮಿತಿಯನ್ನು ನಿಗದಿಪಡಿಸಿದೆ. ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ್, ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಸುಧೀರ್ ಅಗರ್ವಾಲ್ ಮತ್ತು ತಜ್ಞ ಸದಸ್ಯ ಎ ಸೇಂಥಿಲ್ ವೆಲ್ ಅವರನ್ನೊಳಗೊಂಡ ಎನ್‌ಜಿಟಿ ಪೀಠವು ಪ್ರಯಾಗ್ ರಾಜ್ ನಲ್ಲಿ ಗಂಗಾ ಮತ್ತು ಯಮುನಾ ನದಿಗಳಿಗೆ ಕೊಳಚೆ ನೀರು ಬಿಡುವುದನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುತ್ತಿದೆ.