
ತಿರುಪತಿ: ವಿಶ್ವವಿಖ್ಯಾತ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಕಲಬೆರಕೆಯ ತುಪ್ಪ ಬಳಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿಗಳು ಬಹಿರಂಗವಾಗಿದ್ದು ಅದೇನೆಂದರೆ 2019ರಿಂದ 2024ರವರೆಗೆ ರಾಸಾಯನಿಕ ಮಿಶ್ರಿತ ತುಪ್ಪ ಬಳಸಲಾಗುತ್ತಿತ್ತು ಎಂಬುದು ಪ್ರಯೋಗಾಲಯ ಪರೀಕ್ಷೆಗಳಲ್ಲಿ ದೃಢಪಟ್ಟಿದ್ದು, ಈ ಸಂಗತಿಯನ್ನು ತಿಳಿದಿದ್ದರೂ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತುಪ್ಪ ಖರೀದಿಯನ್ನು ಮುಂದುವರಿಸಿತು ಎಂದು ಸಿಬಿಐ ತಿಳಿಸಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ವಿಶೇಷ ತನಿಖಾ ತಂಡ (ಎಸ್ಐಟಿ) ಆಂಧ್ರಪ್ರದೇಶ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ, ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ) ಪರೀಕ್ಷೆಗಳಲ್ಲಿ ತುಪ್ಪದಲ್ಲಿ ಬೀಟಾ-ಸೆಟೊಸ್ಟೆರಾಲ್ ಎಂಬ ರಾಸಾಯನಿಕ ಪತ್ತೆಯಾಗಿದೆ ಎಂದು ಉಲ್ಲೇಖಿಸಿದೆ. ಗುಣಮಟ್ಟದ ಗಂಭೀರ ಸಮಸ್ಯೆ ತಿಳಿದಿದ್ದರೂ ಟಿಟಿಡಿ ಸೂಕ್ತ ಕ್ರಮ ಕೈಗೊಳ್ಳದೆ ವಿಫಲವಾಗಿದೆ ಎಂದು ವರದಿ ತಿಳಿಸಿದೆ. 2020ರಲ್ಲಿ ತುಪ್ಪದ ಟೆಂಡರ್ ನಿಯಮಗಳನ್ನು ಕಠಿಣಗೊಳಿಸಿ, ಐದು ತಿಂಗಳಲ್ಲೇ ಯಾವುದೇ ಸ್ಪಷ್ಟನೆ ನೀಡದೆ ಅವುಗಳನ್ನು ಸಡಿಲಗೊಳಿಸಿರುವುದನ್ನೂ ಎಸ್ಐಟಿ ಗಮನಕ್ಕೆ ತಂದಿದೆ.



















