
ಹೊಸದಿಲ್ಲಿ: ತಿರುಮಲ ತಿರುಪತಿ ದೇವಸ್ಥಾನಕ್ಕೆ ಗುತ್ತಿಗೆ ಒಪ್ಪಂದದಂತೆ 2024ರ ಜೂನ್ ಮತ್ತು ಜುಲೈ ತಿಂಗಳಲ್ಲಿ ಸರಬರಾಜು ಮಾಡಲಾಗಿರುವ ಎರಡು ಟ್ಯಾಂಕರ್ ತುಪ್ಪವನ್ನು ತಮಿಳುನಾಡು ಮೂಲದ ಎ.ಆರ್ ಡೈರಿಯಿಂದ ಪೂರೈಕೆ ಮಾಡಲಾಗಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆಯು ಇತ್ತೀಚಿನ ತನಿಖೆಯಲ್ಲಿ ದೃಢಪಡಿಸಿದೆ.
ತಿರುಪತಿ ದೇವಸ್ಥಾನಕ್ಕೆ ಪೂರೈಸುವುದಕ್ಕೂ ಮೊದಲು ಉತ್ತರಖಂಡದ ಭೋಲೆ ಬಾಬಾ ಆರ್ಗಾನಿಕ್ ಡೈರಿ ಮಿಲ್ಕ್ ಪ್ರೈವೇಟ್ ಲಿಮಿಟೆಡ್ ನಿಂದ ತಿರುಪತಿಯಲ್ಲಿನ ವೈಷ್ಣವಿ ಡೈರಿ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಮೊದಲು ತುಪ್ಪವನ್ನು ಖರೀದಿಸಿದೆ ಎಂದು ತಿಳಿಸಿದೆ. ವೈಷ್ಣವಿ ಡೈರಿಯು ಬೋಲೇ ಬಾಬಾ ಡೈರಿಯಿಂದ ವಿವಿಧ ದರಗಳಲ್ಲಿ ತುಪ್ಪ ಖರೀದಿಸಿ ಆ ತುಪ್ಪವನ್ನು ಕಲಬೆರಿಕೆ ಮಾಡಿದ ನಂತರ ಕಡಿಮೆ ದರಕ್ಕೆ ಎ.ಆರ್ ಡೈರಿಗೆ ಸರಬರಾಜು ಮಾಡಿದೆ ಎಂದು ತನಿಖೆಯಲ್ಲಿ ಕಂಡುಬಂದಿದೆ.
ನಾಲ್ಕು ಟ್ಯಾಂಕರ್ ಗಳಿಂದ ಸಂಗ್ರಹಿಸಲಾಗಿದ್ದ ಮಾದರಿಯಲ್ಲಿ ಪ್ರಾಣಿ ಕೊಬ್ಬು ಇರುವುದು ಗಮನಕ್ಕೆ ಬಂದ ನಂತರ ಎ.ಆರ್ ಡೈರಿಗೆ ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಯು ನೋಟಿಸ್ ಜಾರಿಗೊಳಿಸಿತ್ತು.


ಇ-ಇನ್ವಾಯ್ಸ್ ಗಳು ಹಾಗೂ ಇ-ವೇ ಬಿಲ್ಗಳು ಟ್ಯಾಂಕರ್ ಸಾಗಾಟವನ್ನು ದಾಖಲಿಸಿದ್ದು ಇದು ಮೂಲ ತಮಿಳುನಾಡಿನಿಂದ ಮಾರ್ಗ ಬದಲಾಯಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ತುಪ್ಪದ ವ್ಯಾಪಾರವನ್ನು ನಿಷೇಧಿಸಿದ ಗುತ್ತಿಗೆ ಕರಾರನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಇವೆಲ್ಲವನ್ನೂ ಆಧರಿಸಿ ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಯು ಎ.ಆರ್ ಡೈರಿಯನ್ನು ಕಪ್ಪು ಪಟ್ಟಿಗೆ ಸೇರಿಸಿದೆ.







