
ವಿಧಾನ ಪರಿಷತ್: ಕಂದಾಯ ಸಚಿವ ಕೃಷ್ಣ ಬೈರೇಗೌಡ ತಂದೆ, ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದಿದ್ದರೆ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ತಮ್ಮ ಆಸ್ತಿಯನ್ನು ವಿಲ್ ಅಥವಾ ದಾನಪತ್ರದ ಮೂಲಕ ನೀಡಿರುವುದನ್ನು ರದ್ದು ಮಾಡಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಸದಸ್ಯೆ ಬಲ್ಕಿಸ್ ಬಾನು ಅವರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಮಕ್ಕಳು ತಂದೆ-ತಾಯಿಗಳನ್ನು ಆರೈಕೆ ಮಾಡುತ್ತಿಲ್ಲ, ಅವರ ರಕ್ಷಣೆಗೆ ಕಾನೂನು ತರಬೇಕು ಎಂದು ಮನವಿ ಮಾಡಿದ ವೇಳೆ ಇದಕ್ಕೆ ಪ್ರತಿಕ್ರಿಯಿಸಿದ ಅವರು ಹೊಸ ಕಾನೂನಿನ ಅಗತ್ಯವಿಲ್ಲ, ಕೇಂದ್ರ ಸರ್ಕಾರ 2007ರಲ್ಲೇ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆಯ ಪ್ರಕಾರ ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರನ್ನು ಆರೈಕೆ ಮಾಡಬೇಕು. ಔಷಧಿ ಸೇರಿದಂತೆ ಅವರ ಮಾಸಿಕ ಖರ್ಚಿಗೆ ಹಣ ನೀಡಬೇಕು. ಒಂದು ವೇಳೆ ಹಣ ನೀಡದಿದ್ದರೆ ಅಥವಾ ಆರೈಕೆ ಮಾಡಲು ನಿರ್ಲಕ್ಷಿಸಿದರೆ ಹಿರಿಯ ನಾಗರಿಕರು ಸೆಕ್ಷನ್ 9ರ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ದೂರು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ಹಿರಿಯ ನಾಗರಿಕರ ದೂರು ಸಾಬೀತಾದರೆ, ಸೆಕ್ಷನ್ 23ರಂತೆ ಪೋಷಕರು ತಮ್ಮ ಮಕ್ಕಳ ಅಥವಾ ಸಂಬಂಧಿಕರ ಹೆಸರಿನಲ್ಲಿ ಬರೆದಿರುವ ವಿಲ್ ಅಥವಾ ದಾನಪತ್ರವನ್ನು ರದ್ದುಗೊಳಿಸಿ ಮತ್ತೆ ಪೋಷಕರ ಹೆಸರಿಗೆ ಆಸ್ತಿ ಮರುಸ್ಥಾಪಿಸಲು ಕಾನೂನಿನಲ್ಲಿ ಅವಕಾಶ ಇದೆ. ಈ ಜವಾಬ್ದಾರಿಯನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದ್ದು ಈಗಾಗಲೇ ಉಪ ವಿಭಾಗಾಧಿಕಾರಿಗಳ ಮುಂದೆ ಸಾವಿರಾರು ಪ್ರಕರಣಗಳಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳೂ ಉಪ ವಿಭಾಗಾಧಿಕಾರಿಗಳ ಜೊತೆ ಮಾಸಿಕ ಸಭೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳಿಗೆ ಅಪೀಲು ಹೋಗಲೂ ಸಹ ಅರ್ಜಿದಾರರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.



















































