
ಕಾರ್ಕಳ : ಡಿ. 22ರಂದು ನಾರಾವಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಪರಸ್ಪರ ಯುವಕ ಮಂಡಲ ಈದು ನಾರಾವಿ ಇವರ ನೇತೃತ್ವದಲ್ಲಿ ಮಹಾ ಚಂಡಿಕಾಯಾಗ ಯಶಸ್ವಿಯಾಗಿ ನಡೆದಿದ್ದು ಈ ಯಾಗದಲ್ಲಿ ಸುಮಾರು ಒಂದು ಸಾವಿರ ಭಕ್ತರು ವೃತಾಚರಣೆ ಕೈಗೊಂಡು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಸುಮಾರು ಏಳು ಸಾವಿರ ಮನೆಗಳಿಗೆ ಮಂತ್ರಾಕ್ಷತೆಯೊoದಿಗೆ ಆಮಂತ್ರಣ ಪತ್ರಿಕೆ ಹಂಚಲಾಗಿದ್ದು ನೂರಾರು ವಾಹನಗಳಲ್ಲಿ ಹಸಿರುವಾಣಿ ಹೊರೆಕಾಣಿಕೆ ಹರಿದು ಬಂದಿತ್ತು. ಒಂದು ಸಾವಿರ ಭಜಕರಿಂದ ಕುಣಿತಾ ಭಜನೆ ಕಾರ್ಯಕ್ರಮ ನಡೆದಿದ್ದು ವಿಠಲ ನಾಯಕ್ ಕಲ್ಲಡ್ಕ ಅವರಿಂದ ಗೀತಾಸಾಹಿತ್ಯ ಸಂಭ್ರಮ ನಡೆದಿದೆ.
ಚಂಡಿಕಾಯಾಗದ ರೂವಾರಿ ಗುರುಪ್ರಸಾದ್ ಶೆಟ್ಟಿ ಅವರು ಮಾತಾನಾಡಿ ಹಿಂದೂ ಧರ್ಮದ ರಕ್ಷಣೆಗಾಗಿ ನಾವೆಲ್ಲರೂ ಜಾತಿ, ರಾಜಕೀಯ, ಮೇಲು-ಕೀಳು ಎಂಬ ಬೇಧ-ಭಾವ ಬಿಟ್ಟು ಕೆಲಸ ಮಾಡಿದಾಗ ಹಿಂದೂ ಸಮಾಜ ಗಟ್ಟಿಯಾಗಿ ನಿಲ್ಲುತ್ತವೆ. ಚಂಡಿಕಾಯಾಗ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊoಡಿದ್ದು ಅದರ ಹಿಂದೆ ದುಡಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಚಂಡಿಕಾಯಾಗದಲ್ಲಿ ಸರಿ ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರು ಸೇರಿ ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ ಎಂದು ಅವರು ಹೇಳಿದರು.

ಮುಂಬಯಿ ಮೂಕಾಂಬಿಕಾ ದೇವಸ್ಥಾನದ ಮುಖ್ಯಸ್ಥರಾದ ಅಣ್ಣಿ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಡುಪಿ ಆನೆಗುಂದಿ ಮಹಾಸಂಸ್ಥಾನದ ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಶಾಸಕ ಹರೀಶ್ ಪೂಂಜ, ಆಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್, ಬರೋಡ ಪ್ರಸಿದ್ದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಬಾಲ ವಾಗ್ಮಿ ಕು. ಹಾರಿಕಾ ಮಂಜುನಾಥ್, ಕರ್ನಾಟಕ ರಾಜ್ಯ ಕ್ವಾರಿ ಮತ್ತು ಕ್ರಶರ್ ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು.








