
ಚಿಕ್ಕಬಳ್ಳಾಪುರ: ಕಳೆದ ವಾರವಷ್ಟೇ ಇಳಿಕೆ ಕಂಡಿದ್ದ ಟೊಮೆಟೋ ಬೆಲೆ ಇದೀಗ ಮತ್ತೆ ಏರಿಕೆಯಾಗಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ, ಗ್ರಾಹಕ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಸದ್ಯ ಉತ್ತಮ ಗುಣಮಟ್ಟದ ಟೊಮೇಟೊ ಬೆಲೆ ಒಂದು ಕೆಜಿಗೆ ರೂ70 ರಿಂದ ರೂ 90 ವರೆಗೆ ಮಾರಾಟವಾಗುತ್ತಿದೆ. ಟೊಮೇಟೊ ಹೊರತಾಗಿ ಎಲ್ಲ ಬಗೆಯ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ.
ಇನ್ನು ಒಂದು ವಾರದ ಕಾಲ ಇದೇ ಬೆಲೆ ಮುಂದುವರೆಯಲಿದ್ದು ಮತ್ತೆ ಬೆಲೆ ಏರಿಕೆ ಆಗುವ ಸಾಧ್ಯತೆಗಳಿದೆ ಎಂದು ಎಪಿಎಂಸಿ ಮಾರುಕಟ್ಟೆ ಟೊಮೆಟೊ ಮಂಡಿ ವರ್ತಕರು ಅಭಿಪ್ರಾಯ ಪಟ್ಟಿದ್ದಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ ಗಢ, ದೆಹಲಿ, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತಿತರ ರಾಜ್ಯಗಳಿಗೆ ಟೊಮೇಟೊ ರಫ್ತು ಮಾಡಲಾಗುತ್ತಿದೆ. ಆ ರಾಜ್ಯಗಳಲ್ಲಿ ಟೊಮೆಟೋ ಇಳುವರಿ ಕಡಿಮೆಯಾದ್ದರಿಂದ ಇಲ್ಲಿ ಟೊಮೇಟೊಗೆ ಬೇಡಿಕೆ ಬಂದಿದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.
ಕಳೆದ ಒಂದು ವಾರದವರೆಗೂ 14 ಕೆಜಿ ತೂಕದ ಒಂದು ಬಾಕ್ಸ್ ಟೊಮೆಟೊ ಬೆಲೆ 1000 ದಿಂದ 1300ವರೆಗೂ ಗಡಿ ದಾಟಿತ್ತು. ಆದರೆ ಈ ವಾರ 14 ಕೆಜಿ ತೂಕದ ಒಂದು ಬಾಕ್ಸ್ ಬೆಲೆ 100 ರಿಂದ 300 ರೂಪಾಯಿಗೆ ಕುಸಿತಗೊಂಡಿದ್ದು ರೈತರಿಗೆ ಭಾರೀ ನಿರಾಸೆ ಉಂಟಾಗಿತ್ತು. ಇದೀಗ ಟೊಮೊಟೊ ಬೆಲೆಯಲ್ಲಿ ಮತ್ತೆ ಚೇತರಿಕೆ ಕಂಡಿದ್ದು, ಕನಿಷ್ಟ 200 ರೂ ಹಾಗೂ ಗರಿಷ್ಠ 600 ರೂಪಾಯಿ ವರೆಗೆ ಟೊಮೆಟೊ ಮಾರಾಟವಾಗುತ್ತಿದೆ.