
ಬೆಂಗಳೂರು: ಇತ್ತೀಚೆಗೆ ಯುದ್ಧಕಾಂಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅಜಯ್ ರಾವ್ ಹಾಗೂ ಅವರ ಪತ್ನಿ ಸ್ವಪ್ನ ರಾವ್ ದಂಪತಿ ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಯುದ್ಧಕಾಂಡ ಸಿನಿಮಾದ ನಿರ್ಮಾಣವನ್ನೂ ಮಾಡಿದ್ದ ಅಜಯ್ ರಾವ್ ಅದರಲ್ಲಿ ಯಶಸ್ಸು ಕಂಡುಕೊಂಡಿರಲಿಲ್ಲ. ಆ ವೇಳೆ ನೀಡಿದ ಸಂದರ್ಶನದ ವೇಳೆ ತಮ್ಮ ಸಂಸಾರದ ಬಗ್ಗೆಯೂ ಮಾತನಾಡಿದ ಅವರು ತಮ್ಮ ಯಶಸ್ವಿ ಹಾಗೂ ವೈಫಲ್ಯದ ಪ್ರಯಾಣದ ಕುರಿತು ಮಾತನಾಡಿದ್ದರು. ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅನುಭವಿಸಿದ ಏರಿಳಿತಗಳನ್ನು ಹೇಗೆ ನಿಭಾಯಿಸಿದೆ ಎಂಬುದನ್ನು ಅಜಯ್ ರಾವ್ ಹಂಚಿಕೊಂಡಿದ್ದರು.
‘ನಾನು ಮದುವೆ ಆಗಿದ್ದೇ ತಪ್ಪಾದ ಮಹೂರ್ತದಲ್ಲಿ. ನನ್ನ ಪ್ರೊಡಕ್ಷನ್ ಮೂಲಕ ಬಂದ ಕೃಷ್ಣ ಲೀಲಾ ಸಿನಿಮಾ ಮಾಡಿದ್ದು ಕೂಡ ತಪ್ಪಾದ ಮಹೂರ್ತದಲ್ಲಿ. ನನ್ನ ಯುದ್ಧಕಾಂಡ ಸಿನಿಮಾ ಮಾಡಿದ್ದು ಯಾವ ಮುಹೂರ್ತ ಅನ್ನೋದು ಗೊತ್ತಿಲ್ಲ. ಸಿನಿಮಾ ಡಿಸಾಸ್ಟರ್ ಕಣೋ ಅಂದಿದ್ರು. ಕೆಟ್ಟ ಮಹೂರ್ತದಲ್ಲಿ ವಿವಾಹ ಆಗಿದ್ದೀಯಾ, ಆದರೆ ಮದುವೆ ಒಂದು ವರ್ಷ ಕೂಡ ಬರೋದಿಲ್ಲ. ಡಿವೋರ್ಸ್ ಆಗುತ್ತದೆ’ ಎಂದು ಅಜಯ್ ರಾವ್‌ಗೆ ಜ್ಯೋತಿಷಿಯೊಬ್ಬರು ಹಿಂದೆ ಹೇಳಿದ್ದರು ಎಂದು ಅಜಯ್ ರಾವ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
2014ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಅಜಯ್ ರಾವ್ ಹಾಗೂ ಸ್ವಪ್ನ ರಾವ್, ಅಂದಾಜು 11 ವರ್ಷಗಳ ಕಾಲ ಜೊತೆಯಲ್ಲಿದ್ದು ಈ ದಂಪತಿಗೆ ಚೆರಿಷ್ಮಾ ಹೆಸರಿನ ಹೆಣ್ಣು ಮಗು ಇದೆ. ಜ್ಯೋತಿಷಿ ಹೇಳಿದಂತೆ ಒಂದೇ ವರ್ಷಕ್ಕೆ ವಿಚ್ಛೇದನ ಆಗದೇ ಇದ್ದರೂ, ಆತ ಹೇಳಿದಂತೆ ವಿಚ್ಛೇದನವಂತೂ ಆಗುತ್ತಿರುವುದು ಬೇಸರ ತಂದಿದೆ.