
ಕಾರ್ಕಳ : ಆಂಗ್ಲ ವ್ಯಾವಹಾರಿಕ ಭಾಷೆಯಾದರೆ ತುಳು, ಕನ್ನಡ, ಸಂಸ್ಕೃತ ನಮ್ಮ ಹೃದಯದ ಭಾಷೆ ಎಂದು ಧಾರ್ಮಿಕ ವಿದ್ವಾನ್ ದಾಮೋದರ ಶರ್ಮಾ ಅಭಿಪ್ರಾಯಪಟ್ಟರು.
ಮೇ 6ರಂದು ಕಾರ್ಕಳ ಜೇಸಿಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಬಳಿಕ ಮಾತನಾಡಿದರು.
ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ, ತುಳು ಭಾಷೆ ಮಾತನಾಡುವುದೇ ಅಪರಾಧ ಎಂಬಂತಹ ಸನ್ನಿವೇಶವಿದೆ. ಇಂತಹ ಸ್ಥಿತಿಯಲ್ಲಿ ಕಾರ್ಕಳ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯು ಮಾತೃಭಾಷೆ, ದೇವಭಾಷೆಯೆರಡಕ್ಕೂ ಒತ್ತು ನೀಡುತ್ತಿರುವುದು ಶ್ಲಾಘನೀಯವೆಂದರು.
ಭಗವದ್ಗೀತೆ, ರಾಮಾಯಣ, ಮಹಾಭಾರತವು ಜೀವನದ ಸಂಸ್ಕಾರ ಕಲಿಸುವುದು. ಜೀವನಕ್ಕೆ ದಾರಿ ತೋರುವುದು.ಅಂತಹ ಗ್ರಂಥಗಳು ಪ್ರತಿ ಮನೆಯಲ್ಲಿರಬೇಕು ಎಂದ ದಾಮೋದರ ಶರ್ಮಾ ಅವರು ಮಾತೃದೇವೋಭವ ಎಂಬಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಹೆತ್ತವರನ್ನು ಗೌರವ, ಭಕ್ತಿಯಿಂದ ಕಾಣಬೇಕೆಂದರು.
ಜೇಸಿಸ್ ಶಾಲೆಯ ಸಂಸ್ಕೃತ ಶಿಕ್ಷಕ ಡಾ. ಶಂಕರ್ ನಾರಾಯಣ ಭಟ್, ಅಕ್ಷರಾಭ್ಯಾಸ ಕಾರ್ಯಕ್ರಮ ನೆರವೇರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಚಿತ್ತರಂಜ್ ಶೆಟ್ಟಿ, ಯಾವ ವಿಷಯದಲ್ಲಿ ನಮಗೆ ಪ್ರೀತಿ, ಗೌರವ ದೊರೆಯುವುದೋ ಅಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ತೃಪ್ತಿ ಪ್ರಾಪ್ತಿಯಾಗುವುದು. ಸಂಸ್ಥೆ, ವೃತ್ತಿ ಬಗ್ಗೆ ಪ್ರೀತಿ ತೋರಿದಾಗ ಅದುವೇ ನಮ್ಮನ್ನು ಯಶಸ್ವಿಯತ್ತ ಕೊಂಡೊಯ್ಯುವುದು ಎಂದರು.
ಶಾಲಾ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಜೇಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಜೈನ್, ಮುಖ್ಯ ಶಿಕ್ಷಕಿ ಸುರೇಖಾ ರಾಜ್, ಕಾರ್ಯಕ್ರಮ ಸಂಯೋಜಕಿ ವಂದನಾ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ಯಾಮಲಾ ಭಟ್, ಸಂಗೀತಾ, ದಿವ್ಯಾ ಶಂಕರ್ ವೀಣೆಯಲ್ಲಿ ಸಹಕರಿಸಿದರು. ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿ, ಸುಕನ್ಯಾ ವಂದಿಸಿದರು.







