
ಬೆಂಗಳೂರು : ವಿಭಾಗೀಯ ಪೀಠವು ರಾಜ್ಯದ ವಿವಿಧ ನಗರಗಳಲ್ಲಿ ಒದಗಿಸುತ್ತಿರುವ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವಂತೆ ಓಲಾ, ಉಬರ್ ಕಂಪನಿಗಳಿಗೆ ನಿರ್ದೇಶಿಸಿ ಹೈಕೋರ್ಟ್ ಏಕ ಸದಸ್ಯ ಪೀಠ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದು ಹೀಗಾಗಿ ಈ ಮೊದಲು ನಿಗದಿ ಆದಂತೆ ಜೂ.16ರಿಂದ ಬೈಕ್ ಟ್ಯಾಕ್ಸಿ ಸೇವೆ ರದ್ದಾಗಲಿದೆ.
ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎನ್ಐ ಟಕ್ನಾಲಜಿ ಪ್ರೈವೇಟ್ ಲಿಮಿಟೆಡ್(ಓಲಾ) ಇನ್ನಿತರ ಅಗ್ರಿಗೇಟರ್ ಕಂಪನಿಗಳು ಏಕ ಸದಸ್ಯಪೀಠ ಆದೇಶ ರದ್ದುಪಡಿಸುವಂತೆ ಕೋರಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು ಇದರ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಅವರ ನೇತೃತ್ವದ ವಿಭಾಗೀಯ ಪೀಠ, ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ರಾಜ್ಯ ಸರ್ಕಾರ ನಿಯಮಗಳನ್ನು ರೂಪಿಸಿಲ್ಲ. ರಾಜ್ಯ ಸರ್ಕಾರ ಜೂ.15ರೊಳಗೆ ನಿಯಮಗಳನ್ನು ರೂಪಿಸಬೇಕು. ಇಲ್ಲದೆ ಹೋದರೆ ಜೂ.15ರ ನಂತರ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮುಂದುವರಿಸಬಾರದು ಎಂದು ಏಕಸದಸ್ಯ ಪೀಠ ನಿರ್ದೇಶಿಸಿದೆ. ಇದೀಗ ಸರ್ಕಾರ ನಿಯಮಗಳನ್ನು ರೂಪಿಸುತ್ತಿಲ್ಲ ಎಂದು ತಿಳಿಸಿದೆ. ಇಂತಹ ಸಂದರ್ಭದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮುಂದುವರೆಸಲು ಅನುಮತಿಸಿ ಮೇಲ್ಮನವಿದಾರ ಕಂಪನಿಗಳಿಗೆ ಮಧ್ಯಂತರ ಪರಿಹಾರ ನೀಡಲಾಗದು ಎಂದು ತಿಳಿಸಿ ಮೇಲ್ಮನವಿ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂ.24ಕ್ಕೆ ಮುಂದೂಡಿದೆ.



















