
ಗದಗ: ಗದಗದ ತೋಂಟದಾರ್ಯ ಮಠದ ಪೀಠಾಧಿಪತಿ ಡಾ. ಸಿದ್ದರಾಮ ಶ್ರೀಗಳು ಜಾತಿಗಣತಿ ವರದಿ ಕುರಿತು ಪ್ರತಿಕ್ರಿಯಿಸಿ ಈ ವರದಿ ದೋಷಪೂರಿತವಾಗಿದ್ದು ವರದಿಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಲಿಂಗಾಯತರು ಬಹುಸಂಖ್ಯಾತರೆಂಬುದು ಎಲ್ಲರಿಗೂ ತಿಳಿದಿದೆ. ನಂತರ ಒಕ್ಕಲಿಗರು ಸೇರಿದಂತೆ ವಿವಿಧ ಜಾತಿಯವರು ಮುಂಚೂಣಿಯಲ್ಲಿದ್ದಾರೆ. ಆದರೆ, ಲಿಂಗಾಯತರ ಜನಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು ಲಿಂಗಾಯತರು ಮೀಸಲಾತಿಗಾಗಿ ಉಪಜಾತಿಯ ಹೆಸರನ್ನು ಬರೆಸಿರುವುದು ಇದಕ್ಕೆ ಕಾರಣವಾಗಿರಬಹುದು.
ದೋಷಪೂರಿತ ವರದಿಯನ್ನ ಸರ್ಕಾರ ಒಪ್ಪಿಕೊಳ್ಳುವುದರಿಂದ ಅನೇಕರಿಗೆ ಅನ್ಯಾಯವಾಗಬಹುದು. ಶಿಕ್ಷಣ, ರಾಜಕಾರಣ, ಉದ್ಯೋಗ ಹಾಗೂ ವ್ಯವಸಾಯ ಸೇರಿದಂತೆ ಅನೇಕ ಜಾತಿ ಉಪಜಾತಿಗಳಿಗೆ ಅನ್ಯಾಯವಾಗಬಹುದು. ನೂರಾರು ಉಪಜಾತಿಗಳನ್ನು ವರದಿಯಲ್ಲಿ ಕೈ ಬಿಟ್ಟಿರೋದು ಅತ್ಯಂತ ಆಘಾತಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಲಿಂಗಾಯತರು ಜನಸಂಖ್ಯೆ ಅಂದಾಜಿನ ಪ್ರಕಾರ ಒಂದೂವರೆ ಕೋಟಿ ಇದ್ದು ಆದರೆ, ಲಿಂಗಾಯತ ಸಂಖ್ಯೆ ವರದಿಯಲ್ಲಿ 72 ಲಕ್ಷಕ್ಕೆ ಇಳಿಸಿದ್ದು ಅತ್ಯಂತ ಆಘಾತಕಾರಿಯಾಗಿದೆ. ಸರ್ಕಾರ ಇನ್ನೊಮ್ಮೆ ಪರಿಶೀಲನೆ ಮಾಡಿ ನೈಜ ವರದಿ ಬಿಡುಗಡೆ ಮಾಡಬೇಕು. ಸರ್ಕಾರ ಯಾರಿಗೂ ಅನ್ಯಾಯವಾಗದಂತಹ ವರದಿಯನ್ನ ಸಿದ್ಧಪಡಿಸಿ ಯೋಜನೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.



