
ಕೋಲ್ಕತ್ತಾ: ಪಾಕಿಸ್ತಾನ ಏನೆಂಬುದನ್ನು ಜಗತ್ತಿಗೆ ಅರ್ಥ ಮಾಡಿಸಿ ಎಲ್ಲರ ಮುಂದೆ ಅದರ ಮುಖವಾಡ ಕಳಚಲು ಕೇಂದ್ರ ಸರ್ಕಾರ ಮುಂದಾಗಿದ್ದು ಆದರೆ ನಮ್ಮ ಟಿಎಂಸಿ ಸಂಸದರನ್ನು ನಾವು ಕಳುಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇವಲ ಎನ್ಡಿಎ ಮಾತ್ರವಲ್ಲ ಎಲ್ಲಾ ಪಕ್ಷಗಳ ಸಂಸದರ ನಿಯೋಗವನ್ನು ಮಾಡಿದ್ದು, ಅವರು ವಿಶ್ವದೆಲ್ಲೆಡೆ ಸಂಚರಿಸಿ ಪಾಕ್ ಕಳ್ಳಾಟಗಳ ಕುರಿತು ಮಾಹಿತಿ ನೀಡಲಿದ್ದಾರೆ. ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಕೈಗೊಂಡ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಗ್ಗೆ ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ಥಾನದ ಕಪಟ ಮುಖವನ್ನು ಜಗತ್ತಿಗೆ ಅನಾವರಣಗೊಳಿಸುವ ನಿಟ್ಟಿನಲ್ಲಿ ಸರ್ವ ಪಕ್ಷಗಳ ನಿಯೋಗವನ್ನು ಪ್ರಮುಖ ರಾಷ್ಟ್ರಗಳಿಗೆ ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಪಾಕ್ ವಿರುದ್ಧ ದ್ವಿತೀಯ ಹಂತದ ರಾಜತಾಂತ್ರಿಕ ಯುದ್ಧವನ್ನು ನಡೆಸಲಿದೆ.
ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆ ಕೇಂದ್ರ ಸಚಿವ ಕಿರಣ್ ರಿಜಿಜು ಮಾತುಕತೆ ನಡೆಸಿದ್ದು, ರಾಜತಾಂತ್ರಿಕ ಪ್ರಯತ್ನಕ್ಕೆ ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳು ತಮ್ಮ ಸಂಸದರನ್ನು ಕಳುಹಿಸಲು ಒಪ್ಪಿಗೆ ಸೂಚಿಸಿವೆ.
ಈ ದಾಳಿ ಮತ್ತು ಕಾರ್ಯಾಚರಣೆಯ ನಂತರ, ಪಾಕಿಸ್ತಾನದ ಭಯೋತ್ಪಾದನೆಯನ್ನು ಹರಡುವ ಕಾರ್ಯಸೂಚಿ ಮತ್ತು ಭಾರತದ ಪ್ರತಿಕ್ರಮಗಳನ್ನು ಬಹಿರಂಗಪಡಿಸಲು ಕೇಂದ್ರವು ಏಳು ಸರ್ವಪಕ್ಷ ನಿಯೋಗಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಸೇರಿದಂತೆ ಪ್ರಮುಖ ಜಾಗತಿಕ ರಾಜಧಾನಿಗಳಿಗೆ ಕಳುಹಿಸುವುದಾಗಿ ಘೋಷಿಸಿದ್ದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಮತ್ತು ಆಪರೇಷನ್ ಸಿಂದೂರ್ ವಿರುದ್ಧ ಭಾರತದ ರಾಜತಾಂತ್ರಿಕ ಕಾರ್ಯಾಚರಣೆಗೆ ಪಕ್ಷದ ಯಾವುದೇ ಪ್ರತಿನಿಧಿಯನ್ನು ಕಳುಹಿಸಲು ನಿರಾಕರಿಸಿದ್ದರಿಂದ ಈ ಉಪಕ್ರಮವು ಸ್ವಲ್ಪ ಹಿನ್ನಡೆ ಅನುಭವಿಸಿದೆ.
ಸರ್ವಪಕ್ಷ ನಿಯೋಗಗಳಿಂದ ದೂರವಿರಲು ಟಿಎಂಸಿ ತೆಗೆದುಕೊಂಡ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗಿದ್ದು, ಪಕ್ಷವು ತನ್ನ ಲೋಕಸಭಾ ಸಂಸದ ಯೂಸುಫ್ ಪಠಾಣ್ ಅವರನ್ನು ಅಧಿಕೃತ ಭೇಟಿಯಲ್ಲಿ ಭಾಗವಹಿಸದಂತೆ ಸೂಚಿಸಿದೆ.









