ಗ್ರಾಹಕರಲ್ಲಿ ತೀವ್ರ ಆತಂಕ

ಬೆಳ್ತಂಗಡಿ: ತಾಲೂಕಿನ ಮುಂಡಾಜೆಯ ಸೋಮಂತಡ್ಕ ಪರಿಸರದಲ್ಲಿ ಅಂಗಡಿಯೊಂದರಲ್ಲಿ ಖರೀದಿಸಿದ ಜಂಕ್ ಫುಡ್ನ ಪೊಟ್ಟಣವೊಂದರಲ್ಲಿ ಸುಟ್ಟು ಕರಕಲಾದ ಸಣ್ಣ ಹಾವಿನ ಮಾದರಿಯ ತುಂಡು ಪತ್ತೆಯಾಗಿದ್ದು ಗ್ರಾಹಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಮಕ್ಕಳು ಸ್ಥಳೀಯ ಅಂಗಡಿಯಿಂದ ಜಂಕ್ ಫುಡ್ ಪ್ಯಾಕೆಟ್ ಖರೀದಿಸಿದ್ದು ಮನೆಗೆ ಬಂದು ಪೊಟ್ಟಣ ತೆರೆದು ತಿನ್ನುವ ವೇಳೆ ಅದರಲ್ಲಿ ಸುಟ್ಟಹಾವಿನ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಇದನ್ನು ಕಂಡು ಬೆಚ್ಚಿಬಿದ್ದ ಮಕ್ಕಳು ತಕ್ಷಣ ಪೋಷಕರಿಗೆ ವಿಷಯ ತಿಳಿಸಿದ್ದು ಆತಂಕಗೊಂಡ ಮನೆಯವರು ತಕ್ಷಣವೇ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೊಳಪಡಿಸಿದ್ದಾರೆ. ವೈದ್ಯರು ಪರೀಕ್ಷಿಸಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.


ಇದೀಗ ಹಾವಿನ ಮಾದರಿಯ ವಸ್ತುವಿದ್ದ ಜಂಕ್ ಫುಡ್ ಪೊಟ್ಟಣದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು ಈ ಬಗ್ಗೆ ಆರೋಗ್ಯ ಇಲಾಖೆಗೆ ಮನೆಯವರು ದೂರು ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಪತ್ತೆಯಾದ ವಸ್ತುವಿನ ಮಾದರಿಯನ್ನು ತಪಾಸಣೆಗೆ ಕಳುಹಿಸಿದ್ದು ವರದಿ ಇನ್ನಷ್ಟೇ ಬರಬೇಕಿದೆ.







