
ಬೆಂಗಳೂರು: ಜೂ.4ರಂದು ಸಂಭವಿಸಿದ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಿಂದ ಭಾರೀ ನೋವು ಅನುಭವಿಸಿದ್ದ ಅಭಿಮಾನಿಗಳಿಗಾಗಿ ಆರ್‌ಸಿಬಿ ಆಡಳಿತ ಮಂಡಳಿಯು ಇದೀಗ ಕೇರ್ ಸೆಂಟರ್ ತೆರೆಯಲು ನಿರ್ಧರಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಆರ್‌ಸಿಬಿ, ಚಿನ್ನಸ್ವಾಮಿ ಸ್ಟೇಡಿಯಂ ಒಂದು ಕಾಲದಲ್ಲಿ ಅಭಿಮಾನಿಗಳು ಹೆಚ್ಚು ಸಂಭ್ರಮದಿಂದ ಕಳೆದ ಸ್ಥಳ. ಆದರೆ ಕಾಲ್ತುಳಿತದ ದುರ್ಘಟನೆಯಿಂದ ಆ ಸಂಭ್ರಮ ಮರೆಯಾಗಿ ನಮ್ಮ ಹೃದಯ ಚೂರಾಯಿತು. ಈ ಸಂಕಟವನ್ನು ನಾವು ಮೂರು ತಿಂಗಳ ಕಾಲ ಮೌನವಾಗಿ ಅನುಭವಿಸಿದ್ದೇವೆ. ಈ ದುರ್ಘಟನೆಯಿಂದ ಸಾಕಷ್ಟು ಕಲಿತಿದ್ದೇವೆ. ಇದಕ್ಕಾಗಿಯೇ ನಾವು ಅಭಿಮಾನಿಗಳ ಜೊತೆ ನಿಲ್ಲಲು ನಿರ್ಧರಿಸಿದ್ದು ಇದೇ ಕಾರಣಕ್ಕೆ ಅಭಿಮಾನಿಗಳಿಗಾಗಿ ಕೇರ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ. ಈ ಮೂಲಕ ಕರ್ನಾಟಕದ ಹೆಮ್ಮೆಯಾಗಿ ಮುಂದುವರಿಯುತ್ತೇವೆ. ಈ ಬಗ್ಗೆ ಹೆಚ್ಚಿನ ವಿವರ ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ ಎಂದು ಆರ್‌ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದೆ.