
ಗದಗ: ಜ.10ರಂದು ತಾಲೂಕಿನ ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಅಪರೂಪದ ಚಿನ್ನದ ಆಭರಣಗಳ (ನಿಧಿ) ಪತ್ತೆಯಾಗಿರುವ ಪ್ರಕರಣ ಹೊಸ ತಿರುವು ಪಡೆದಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಜ.16ರಿಂದ ಅಧಿಕೃತ ಉತ್ಖನನ ಕಾರ್ಯ ಆರಂಭಿಸಲು ನಿರ್ಧರಿಸಿದೆ. ಮನೆಯ ಅಡಿಪಾಯ ತೆಗೆಯುವ ವೇಳೆ ಸುಮಾರು ಅರ್ಧ ಕೆಜಿ ತೂಕದ ಚಿನ್ನದ ಆಭರಣಗಳು ಸಿಕ್ಕಿರುವುದು ಗ್ರಾಮವಷ್ಟೇ ಅಲ್ಲದೆ ಇಡೀ ರಾಜ್ಯದ ಗಮನ ಸೆಳೆಯುವಂತಾಗಿದೆ. ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆರಂಭಗೊಳ್ಳಲಿರುವ ಉತ್ಖನನ ಕಾರ್ಯವು ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ಚಾಲುಕ್ಯರ ಕಲಾ ವೈಭವದ ಪ್ರಮುಖ ಕೇಂದ್ರವಾಗಿರುವ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಭಾರೀ ಸಂಚಲನ ಮೂಡಿಸಿದೆ. ನಿಧಿಯ ಹಿಂದೆ ಅಡಗಿರುವ ಐತಿಹಾಸಿಕ ರಹಸ್ಯಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ರಾಜ್ಯ ಸರ್ಕಾರ ಬೃಹತ್ ಕಾರ್ಯಾಚರಣೆಗೆ ಮುಂದಾಗಿದ್ದು, ಇಡೀ ಗ್ರಾಮವನ್ನೇ ಸ್ಥಳಾಂತರಿಸುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ.
ಪುರಾತತ್ವ ಇಲಾಖೆ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಒಟ್ಟು 48 ಸಿಬ್ಬಂದಿಗಳ ನೇತೃತ್ವದಲ್ಲಿ ಇಂದಿನಿಂದ ಅಧಿಕೃತವಾಗಿ ಉತ್ಖನನ ಕಾರ್ಯ ಆರಂಭವಾಗಲಿದೆ. ಈ ಕಾರ್ಯಕ್ಕಾಗಿ ಈಗಾಗಲೇ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮೊದಲ ಹಂತದ ಸಂಶೋಧನೆ ನಡೆಯಲಿದೆ.
ಈ ಕುರಿತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, “ಲಕ್ಕುಂಡಿ ಗ್ರಾಮದ ಬಹುತೇಕ ಪ್ರತಿಯೊಂದು ದೇವಸ್ಥಾನದ ಅಡಿಯಲ್ಲಿ ಅಪಾರ ಸಂಪತ್ತು ಇರುವ ಸಾಧ್ಯತೆ ಇದೆ. ಈ ಐತಿಹಾಸಿಕ ಸತ್ಯಗಳನ್ನು ಹೊರತೆಗೆದುಕೊಳ್ಳಲು ಇಡೀ ಗ್ರಾಮವನ್ನೇ ಸ್ಥಳಾಂತರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಸ್ಥಳದಲ್ಲಿ ಬಿಗಿ ಭದ್ರತೆ ವ್ಯವಸ್ಥೆ ಮಾಡಿದ್ದಾರೆ.



















