
ಡೆಹರಾಡೂನ್: ಉತ್ತರಖಂಡದ ಚಾರ್‌ಧಾಮ್ ಯಾತ್ರೆಗೆ ಬರುವ ಭಕ್ತರಿಗಾಗಿ ಈ ಬಾರಿ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದ್ದು ಅದೇನೆಂದರೆ ಬದರಿನಾಥ, ಕೇದರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ದೇವಸ್ಥಾನಗಳ ಪವಿತ್ರ ಆವರಣದೊಳಗೆ ಮೊಬೈಲ್ ಫೋನ್‌ಗಳು ಹಾಗೂ ಕ್ಯಾಮೆರಾಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಗರ್ವಾಲ್ ಕಮಿಷನರ್ ವಿನಯ್ ಶಂಕರ್ ಪಾಂಡೆ ದೇವಸ್ಥಾನಗಳೊಳಗೆ ಫೋಟೋ ಮತ್ತು ವೀಡಿಯೋ ಚಿತ್ರೀಕರಣ ನಡೆಯುವುದರಿಂದ ದರ್ಶನದ ವ್ಯವಸ್ಥೆ ವ್ಯತ್ಯಯಗೊಳ್ಳುತ್ತಿತ್ತು. ಜೊತೆಗೆ ಪವಿತ್ರ ಸ್ಥಳಗಳ ಗೌರವ ಮತ್ತು ಶಿಸ್ತು ಕಾಪಾಡುವ ದೃಷ್ಟಿಯಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಭಕ್ತರು ದೇವಾಲಯದೊಳಗೆ ಪ್ರವೇಶಿಸುವ ಮುನ್ನ ತಮ್ಮ ಮೊಬೈಲ್ ಫೋನ್‌ಗಳು ಮತ್ತು ಕ್ಯಾಮೆರಾಗಳನ್ನು ದೇವಸ್ಥಾನ ಆಡಳಿತ ಮಂಡಳಿ ನಿಗದಿಪಡಿಸಿರುವ ಸಂಗ್ರಹ ಕೌಂಟರ್‌ಗಳಲ್ಲಿ ಹಸ್ತಾಂತರಿಸಬೇಕಾಗುತ್ತದೆ. ದರ್ಶನ ಪೂರ್ಣಗೊಂಡ ಬಳಿಕ ದೇವಾಲಯದ ಹೊರಭಾಗದಲ್ಲಿ, ಹಿನ್ನಲೆಯಲ್ಲಿ ದೇವಾಲಯ ಸ್ಪಷ್ಟವಾಗಿ ಕಾಣುವಂತೆ ಫೋಟೋ ತೆಗೆಯಲು ಅವಕಾಶ ಕಲ್ಪಿಸಲಾಗಿದ್ದು ಆದರೆ ಬದರಿನಾಥದ ಸಿಂಹದ್ವಾರವನ್ನು ದಾಟಿದ ನಂತರ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಳಗೆ ಕೊಂಡೊಯ್ಯಲು ಅನುಮತಿ ಇರುವುದಿಲ್ಲ ಎಂದು ಸೂಚಿಸಲಾಗಿದೆ.








