ಅವರು ತಮ್ಮ ಭಾವನೆ ವ್ಯಕ್ತಪಡಿಸಿದ್ದು ಇದು ಕೋಮುದ್ವೇಷವಾಗುತ್ತದೆಯೇ? : ಹೈಕೋರ್ಟ್ ಪ್ರಶ್ನೆ

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಶುಕ್ರವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಬೆಳಗ್ಗೆ ಬದಲು ಮಧ್ಯಾಹ್ನ ನಿಗದಿಪಡಿಸಿದ್ದಕ್ಕೆ ‘ನಮಾಜ್ ಸಮಯ’ ಎಂದು ಟ್ವೀಟ್ ಮಾಡಿದ ಸಂಬಂಧ ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ದಾಖಲಾಗಿದೆ. ಈ ಪ್ರಕರಣ ಹಾಗೂ ಅದರ ಸಂಬಂಧ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆಕೋರಿ ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀಶಾನಂದ ಅವರಿದ್ದ ಏಕ ಸದಸ್ಯ ಪೀಠವು ಫೇಸ್ಬುಕ್ ನಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದವರಿಗೂ ಜಾಮೀನು ಕೊಟ್ಟು ಪ್ರಕರಣ ರದ್ದುಪಡಿಸಲಾಗಿದೆ. ನಿಜವಾಗಿ ಈ ವಿಚಾರ ನಮ್ಮ ದೇಶದ ವಿರುದ್ಧ ಕೋಮು ದ್ವೇಷವಾಗುತ್ತದೆ. ಆದರೆ ಶುಕ್ರವಾರದ ಪರೀಕ್ಷೆಯ ಸಮಯ ಬೆಳಗ್ಗೆ ಬದಲಿಗೆ ಮಧ್ಯಾಹ್ನ ನಿಗದಿಪಡಿಸಿದ್ದಕ್ಕೆ ‘ನಮಾಜ್ ಗಾಗಿ ಸಮಯ ಬದಲು’ ಎಂದು ಹೇಳಿದರೆ ಕೋಮು ದ್ವೇಷ ಏನಿದೆ ಎಂದು ಅರ್ಥವಾಗುತ್ತಿಲ್ಲ ಎಂದು ಹೇಳಿ ಈ ಪ್ರಕರಣಕ್ಕೆ ತಡೆ ನೀಡಿದೆ.
ವಿಚಾರಣೆ ವೇಳೆ ಸರ್ಕಾರಿ ವಕೀಲರು ಸೂಲಿಬೆಲೆ ಪದೇ ಪದೇ ಕಾನೂನು ಉಲ್ಲಂಘಿಸುವ ಚಾಳಿ ಹೊಂದಿದ್ದು ಅವರ ವಿರುದ್ಧ ಸದ್ಯ ಮೂರು ಪ್ರಕರಣ ಬಾಕಿ ಇದೆ. 2024ರ ಫೆಬ್ರವರಿಯಲ್ಲಿ ಪ್ರಕರಣ ದಾಖಲಾಗಿದ್ದು ಈಗ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಹಾಲಿ ಪ್ರಕರಣವು ಮೊದಲ ಬಾರಿಗೆ ವಿಚಾರಣೆಗೆ ನಿಗದಿಯಾಗಿದ್ದು ತನಿಖಾಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದು ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ಪರೀಕ್ಷೆಯನ್ನು ಮಾತ್ರ ಮಧ್ಯಾಹ್ನ ಇಟ್ಟಿದ್ದೀರಿ ಏಕೆ? ಎಂಬ ಪ್ರಶ್ನೆ ಸೂಲಿಬೆಲೆಗೆ ಬಂದಿದೆ. ಆ ಕುರಿತು ಅವರು ತಮ್ಮ ಭಾವನೆ ವ್ಯಕ್ತಪಡಿಸಿದ್ದು ಹಬ್ಬ ಆಗಿರುವುದಕ್ಕೆ ರಜೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದು ಕೋಮು ದ್ವೇಷವಾಗುತ್ತದೆಯೇ? ಎಂದು ಪ್ರಶ್ನಿಸಿರುವ ಹೈಕೋರ್ಟ್ ಸದ್ಯ ಪ್ರಕರಣಕ್ಕೆ ಅರ್ಜಿಯ ಮುಂದಿನ ವಿಚಾರಣೆವರೆಗೆ ತಡೆ ನೀಡಿದೆ.





