
ಮುಂಬೈ: ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ ಶೆಟ್ಟಿ ಅವರು ಮಂದಿರದ ಸಭಾಂಗಣದಲ್ಲಿ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಲದ ವತಿಯಿಂದ ಆಯೋಜಿಸಲಾಗಿದ್ದ 21ನೇ ವಾರ್ಷಿಕ ಉಚಿತ ಪುಸ್ತಕ ವಿತರಣೆ ಶಾಲಾ ಪರಿಕರಗಳ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು ಈ ವೇಳೆ ಮಕ್ಕಳು ಒಳ್ಳೆಯ ರೀತಿಯಲ್ಲಿ ಕಲಿತು ಒಳ್ಳೆಯ ಸಂಸ್ಕಾರ ಪಡೆದು ಉತ್ತಮ ನಾಗರಿಕರಾಗಬೇಕು. ಅಡ್ಡದಾರಿ ಹಿಡಿಯದೆ ಒಳ್ಳೆಯ ದಾರಿಯಲ್ಲಿ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಳೆದ 21 ವರ್ಷಗಳಿಂದ ನಮ್ಮ ದೇವಾಲಯದ ವತಿಯಿಂದ ಉಚಿತವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ನಡೆಸುತ್ತಿದ್ದು ಪ್ರತಿವರ್ಷ ಉಚಿತ ಪುಸ್ತಕ ಹಾಗೂ ಇತರ ಶಾಲಾ ಪರಿಕರ, ಪ್ರತಿಭಾ ಪುರಸ್ಕಾರವನ್ನು ನೀಡುತ್ತಾ ಬಂದಿದ್ದೇವೆ. ಕುಸುಮದರ ಶೆಟ್ಟಿ ಅವರು ಭವಾನಿ ಫೌಂಡೇಶನ್ ಮುಖಾಂತರ 4-5 ಶಾಲೆಗಳನ್ನು ದತ್ತು ಪಡೆದು ಮುನ್ನಡೆಸುವಂತಹ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಮಕ್ಕಳು ಕಲಿತು ದೊಡ್ಡವರಾದ ಮೇಲೆ ನಮ್ಮನ್ನು ಸಾಕಿ-ಸಲುಹಿದ ತಂದೆ ತಾಯಿ, ವಿದ್ಯೆ ಕಲಿಸಿದ ಗುರು ಹಾಗೂ ನಮಗೆ ಸಹಕರಿಸಿದ ಸಮಾಜದ ಋಣವನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಒಂದರಿಂದ 10ನೇ ತರಗತಿವರೆಗಿನ ಪರಿಸರದ 1,500 ಮಕ್ಕಳಿಗೆ ಶಾಲಾ ಪರಿಕರಗಳನ್ನು ವಿತರಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಕಳೆದ ಸಾಲಿನ ಎಸ್ಎಸ್ ಸಿ, ಎಚ್ ಎಸ್ ಸಿ ಪ್ರತಿಭಾವಂತ ನೂರು ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ಮತ್ತು ಆರ್ಥಿಕ ನೆರವು ನೀಡಿ ಗೌರವಿಸಲಾಯಿತು.

ಭವಾನಿ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಕುಸುಮೋದರ ಶೆಟ್ಟಿ, ಫೆಡರೇಷನ್ ಆಫ್ ಹೋಟೆಲ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಮಹಾರಾಷ್ಟ್ರ ಇದರ ಉಪಾಧ್ಯಕ್ಷ ಶ್ಯಾಮ್ ಎನ್ ಶೆಟ್ಟಿ, ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಲದ ಅಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ, ಉಪಾಧ್ಯಕ್ಷ ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡುಬಿದ್ರೆ, ಕೋಶಾಧಿಕಾರಿ ಟಿ. ಗೌಡ ಬಂಟರ ಸಂಘ ಮೀರಾ-ಬಾಯಂದರ್ ಸಮಿತಿಯ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.








