
ಸುಬ್ರಹ್ಮಣ್ಯ: ದೇಶದಲ್ಲಿ ಎದುರಾಗಿರುವ ಗ್ಯಾಸ್ ಪೂರೈಕೆ ವ್ಯತ್ಯಯದ ಪರಿಣಾಮ ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ತಟ್ಟಿದೆ. ಈ ಹಿನ್ನೆಲೆ ಮಾ.11ರ ಬುಧವಾರದಿಂದ ಬೆಳಿಗ್ಗೆ ನೀಡಲಾಗುವ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದೆ.
ಸಾಮಾನ್ಯವಾಗಿ ಪ್ರತಿದಿನ ಬೆಳಿಗ್ಗೆ ವಿವಿಧ ಬಗೆಯ ಉಪಹಾರವನ್ನು ಭಕ್ತರಿಗೆ ವಿತರಿಸಲಾಗುತ್ತಿತ್ತು. ಆದರೆ ಗ್ಯಾಸ್ ಕೊರತೆಯಿಂದಾಗಿ ಬೇಯಿಸಿ ತಯಾರಿಸುವ ತಿಂಡಿಗಳ ಬದಲಿಗೆ ಅವಲಕ್ಕಿ ಮತ್ತು ಮೊಸರು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ದೇವಸ್ಥಾನದಲ್ಲಿ ಇನ್ನೂ ಸುಮಾರು ಮೂರು ದಿನಗಳಿಗೆ ಸಾಲುವಷ್ಟು ಗ್ಯಾಸ್ ಮಾತ್ರ ಉಳಿದಿದ್ದು, ಬಳಿಕ ಪೂರೈಕೆ ಆಗದಿದ್ದರೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದಿನಕ್ಕೆ 20 ಸಿಲಿಂಡರ್ ಗ್ಯಾಸ್ ಪೂರೈಕೆ ಮಾಡುವಂತೆ ಗ್ಯಾಸ್ ಪೂರೈಕೆ ಸಂಸ್ಥೆಗಳಿಗೆ ದೇವಸ್ಥಾನ ಆಡಳಿತ ಪತ್ರ ಬರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇನ್ನೂ ಗ್ಯಾಸ್ ಸರಬರಾಜು ಸಿಗದಿದ್ದರೆ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಯಲ್ಲಿಯೂ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಅಗತ್ಯವಿದ್ದಲ್ಲಿ ಈ ಕುರಿತು ದೇವಸ್ಥಾನದ ವತಿಯಿಂದ ಅಧಿಕೃತ ಮಾಹಿತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.







