
ಪಣಜಿ: ಉತ್ತರ ಗೋವಾದ ಅರ್ಪೋರಾದಲ್ಲಿರುವ ರೋಮಿಯೋ ಲೇನ್‌ನ ಪ್ರಸಿದ್ಧ ನೈಟ್‌ಕ್ಲಬ್ ಬಿರ್ಚ್‌ನಲ್ಲಿ ಬೆಳಗಿನ ಜಾವ ಸುಮಾರು 1 ಗಂಟೆ ವೇಳೆಗೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ ಪ್ರವಾಸಿಗರು ಸೇರಿ 25 ಮಂದಿ ಸಜೀವ ದಹನವಾಗಿದ್ದಾರೆ ಎಂದು ವರದಿಯಾಗಿದೆ.
50 ಮಂದಿ ಗಾಯಗೊಂಡಿದ್ದು ಎಲ್ಲರು ಗೋವಾದ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಡುಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟವಾಗಿರಬಹುದು ಎಂದು ಶಂಕಿಸಲಾಗಿದ್ದು ಆದರೆ ಪೊಲೀಸರ ಪರಿಶೀಲನೆ ಸಮಯದಲ್ಲಿ ಸಿಲಿಂಡರ್ ಹಾಗೆಯೇ ಇತ್ತು. ಸ್ಫೋಟದ ತೀವ್ರತೆಗೆ ಜ್ವಾಲೆಗಳು ಕೆಲವೇ ಸೆಕೆಂಡುಗಳಲ್ಲಿ ಇಡೀ ಕಟ್ಟಡವನ್ನು ಆವರಿಸಿಕೊಂಡಿತ್ತು. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಗೊಂಡವರ ಸಂಖ್ಯೆ ಮತ್ತು ಸ್ಥಿತಿಯ ಕುರಿತು ಅಧಿಕೃತ ವಿವರಗಳು ಇನ್ನಷ್ಟೇ ಬರಬೇಕಿದೆ. ನೈಟ್‌ಕ್ಲಬ್ ಅನ್ನು ಸದ್ಯಕ್ಕೆ ಸೀಲ್ ಮಾಡಲಾಗಿದ್ದು, ಮಾಲೀಕರು ಮತ್ತು ಆಡಳಿತ ಮಂಡಳಿಯ ವಿಚಾರಣೆ ಮುಂದುವರೆದಿದೆ.



















