
ಬೆಂಗಳೂರು: ಯುಗಾದಿ ಸಂಭ್ರಮಾಚರಣೆಯಲ್ಲಿರುವ ಜನತೆಗೆ ರಾಜ್ಯ ಸರ್ಕಾರವು ಮೇಲಿಂದ ಮೇಲೆ ಶಾಕ್ ನೀಡುತ್ತಿದ್ದು ಅದೇನೆಂದರೆ ಹಾಲು, ಮೊಸರಿನ ಬೆಲೆ ಏರಿಕೆ ಬೆನ್ನಲ್ಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಏ.1ರಿಂದ ಅನ್ವಯವಾಗುವಂತೆ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು, ಗೃಹ ಬಳಕೆ ಗ್ರಾಹಕರಿಗೆ ವಿದ್ಯುತ್ ದರ, ನಿಗದಿತ ಶುಲ್ಕ ಹೆಚ್ಚಳ ಮೂಲಕ ಬರೆ ಹಾಕಿದೆ.
ಕೆಇಆರ್‌ಸಿ ಆದೇಶದ ಪರಿಣಾಮ ಏ.1ರಿಂದ ಅನ್ವಯವಾಗುವಂತೆ 2025-26ನೇ ಸಾಲಿಗೆ ಗೃಹ ಬಳಕೆದಾರರಿಗೆ ವಿದ್ಯುತ್ ದರ ಪ್ರತಿ ಯುನಿಟ್‌ಗೆ 26 ಪೈಸೆ ಹಾಗೂ ನಿಗದಿತ ಶುಲ್ಕ ಪ್ರತಿ ಕಿ.ವ್ಯಾಟ್‌ಗೆ ಬರೋಬ್ಬರಿ 25 ರು. ಹೆಚ್ಚಳ ಆಗಲಿದೆ. ಮತ್ತೊಂದೆಡೆ ಕೈಗಾರಿಕೆ ಹಾಗೂ ವಾಣಿಜ್ಯ ಸಂಪರ್ಕಗಳಿಗೆ ಪ್ರತಿ ಯುನಿಟ್‌ಗೆ 64 ಪೈಸೆಯಿಂದ 1.75 ರು.ವರೆಗೆ ವಿದ್ಯುತ್ ದರದಲ್ಲಿ ಭಾರಿ ಕಡಿತ ಆಗಲಿದೆ. ನಿಗದಿತ ಶುಲ್ಕವೂ 5 ರು.ಹಾಗೂ 10 ರು.ಮಾತ್ರ ಹೆಚ್ಚಳ ಮಾಡಲಾಗಿದೆ. ಇದೇ ವೇಳೆ ಕೈಗಾರಿಕೆ ಹಾಗೂ ವಾಣಿಜ್ಯ ಸಂಪರ್ಕಗಳಿಗೆ ಶುಲ್ಕ ಕಡಿತದ ಯುಗಾದಿ ಕೊಡುಗೆ ನೀಡಿದೆ.
ವಾರ್ಷಿಕ ದರ ಪರಿಷ್ಕರಣೆಯಲ್ಲಿ ಗೃಹ ಬಳಕೆ ವಿದ್ಯುತ್ ದರ ಪ್ರತಿ ಯುನಿಟ್‌ಗೆ 10 ಪೈಸೆ ಕಡಿಮೆ ಮಾಡಲಾಗಿದೆ. ಆದರೆ, ಮಾ.18 ರಂದು ಕೆಇಆರ್‌ಸಿಯು ಪಿಟಿಸಿಎಲ್, ಎಸ್ಕಾಂಗಳ ನೌಕರರ ಪಿಂಚಣಿ, ಗ್ರಾಚ್ಯುಟಿ ಹೊರೆ ಗ್ರಾಹಕರ ಮೇಲೆ ಹಾಕಿ ರೀತಿಯ ಸಂಪರ್ಕಗಳಿಗೂ ಏ.1ರಿಂದ ಅನ್ವಯವಾಗುವಂತೆ ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿತ್ತು. ಹೀಗಾಗಿ ವಾರ್ಷಿಕ ದರ ಪರಿಷ್ಕರಣೆಯಲ್ಲಿ ಕೆಇಆರ್‌ಸಿಯು ಗೃಹ ಬಳಕೆ ದರ 10 ಪೈಸೆ ಕಡಿಮೆ ಮಾಡಿದ್ದರೂ ಏ.1ರಿಂದ ಅನ್ವಯವಾಗುವಂತೆ 26 ಪೈಸೆ ಹೊರೆ ಬೀಳಲಿದೆ. ಇನ್ನು ಪ್ರತಿ ಕಿ.ವ್ಯಾಟ್‌ಗೆ 120 ರು. ಇದ್ದ ನಿಗದಿತ ಶುಲ್ಕವನ್ನು 145 ರು.ಗೆ ಹೆಚ್ಚಳ ಮಾಡುವುದರಿಂದ ಜನತೆಗೆ ನಿಗದಿತ ಶುಲ್ಕ ತೀವ್ರ ಹೊರೆಯಾಗಲಿದೆ.
ಶೂನ್ಯ ಬಿಲ್ ಪಡೆಯುತ್ತಿರುವ ಗೃಹ ಜ್ಯೋತಿ ಫಲಾನುಭವಿಗಳ ವಿದ್ಯುತ್ ಶುಲ್ಕ ಸರ್ಕಾರವೇ ಭರಿಸುವುದರಿಂದ ಅಂತಹ ಗ್ರಾಹಕರಿಗೆ ಹೊರೆ ಆಗುವುದಿಲ್ಲ. ಆದರೆ ಗೃಹಜ್ಯೋತಿ ವ್ಯಾಪ್ತಿಗೆ ಬಾರದ ಗ್ರಾಹಕರು ಹಾಗೂ ಗೃಹಜ್ಯೋತಿ ಫಲಾನುಭವಿಗಳಾಗಿದ್ದರೂ ಅರ್ಹತೆ ಪಡೆದಿರುವ ಉಚಿತ ಮಿತಿಗಿಂತ ಹೆಚ್ಚು ಬಳಸುತ್ತಿರುವ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಮತ್ತೊಂದೆಡೆ ಎಲ್‌ಟಿ ಹಾಗೂ ಎಚ್‌ಟಿ ವಾಣಿಜ್ಯ, ಕೈಗಾರಿಕಾ ಸಂಪರ್ಕಗಳ ವಿದ್ಯುತ್ ದರವನ್ನು ತೀವ್ರ ಕಡಿಮೆ ಮಾಡಿದ್ದು, ನಿಗದಿತ ಶುಲ್ಕವನ್ನು ಪ್ರತಿ ಎಚ್‌ಪಿಗೆ 10 ರು. ಹಾಗೂ ಪ್ರತಿ ಕೆವಿಎಗೆ 5 ರು. ಮಾತ್ರ ಹೆಚ್ಚಳ ಮಾಡಿದೆ. ಎಲ್‌ಟಿ ವಾಣಿಜ್ಯ ಸಂಪರ್ಕಗಳಿಗೆ ಪ್ರತಿ ಯುನಿಟ್‌ಗೆ 8 ರು. ಇದ್ದ ವಿದ್ಯುತ್ ಶುಲ್ಕ ಮಾ.18 ರಿಂದ 8.36 ರು.ಗೆ ಹೆಚ್ಚಳ ಆಗಿತ್ತು. ಇದೀಗ 1 ರು. ಕಡಿಮೆ ಮಾಡಿದ್ದು, 7.36 ರು. ಪಾವತಿಸಬೇಕಾಗಿದೆ. ಹೀಗಾಗಿ ಒಟ್ಟಾರೆ ಕಳೆದ ವರ್ಷಕ್ಕೆ ಹೋಲಿಸಿದರೆ 64 ಪೈಸೆ ಕಡಿಮೆಯಾಗಲಿದೆ. ಇದೇ ರೀತಿ ಎಲ್‌ಟಿ-5 ಕೈಗಾರಿಕೆ ಸಂಪರ್ಕಗಳಿಗೆ 1.60 ರು. ಕಡಿಮೆ ಮಾಡಿದ್ದು, 1.24 ರು. ಕಡಿಮೆಯಾಗಲಿದೆ. ಎಚ್‌ಟಿ-1 ಕೈಗಾರಿಕಾ ಗ್ರಾಹಕರಿಗೆ 6.90 ರು. ಇದ್ದ ಬೆಲೆ 6.96 ರು. ಆಗಲಿದ್ದು, ದರ 6 ಪೈಸೆ ಹೆಚ್ಚಳ ಆಗಲಿದೆ.