ಈ ಕುರಿತು ಸದನಕ್ಕೆ ಮಾಹಿತಿ ನೀಡಬೇಕಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾಣೆ : ಬಿಜೆಪಿ

ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ‘ಗೃಹಲಕ್ಷ್ಮಿ’ ಯೋಜನೆಯ ಹಣ ನೀಡದೆ 5000 ಕೋಟಿ ರು. ಹಗರಣ ನಡೆಸಿದ್ದು ಈ ಕುರಿತು ಸದನಕ್ಕೆ ಮಾಹಿತಿ ನೀಡಬೇಕಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾಣೆಯಾಗಿದ್ದಾರೆ. ಖಜಾನೆ ಖಾಲಿಯಾಗಿದೆಯೇ ಅಥವಾ ಆ ಹಣ ಬಿಹಾರ ಚುನಾವಣೆಗೆ ಖರ್ಚಾಗಿದೆಯೇ ಎಂದು ರಾಜ್ಯ ಬಿಜೆಪಿಯು ಅಧಿಕೃತ ಎಕ್ಸ್ ಖಾತೆ ಮೂಲಕ ಕಟುವಾಗಿ ಪ್ರಶ್ನೆ ಮಾಡಿದೆ.
ವಿರೋಧಪಕ್ಷದ ನಾಯಕ ಆರ್.ಅಶೋಕ್, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ನೀಡಬೇಕಾಗಿದ್ದ 5,000 ಕೋಟಿ ರು. ನೀಡಿಲ್ಲ. ಇದೊಂದು ದೊಡ್ಡ ಹಗರಣ. ಈ ಬಗ್ಗೆ ಪ್ರಶ್ನಿಸಿದರೆ ಮುಖ್ಯಮಂತ್ರಿಗಳು ಸೋಮವಾರ ಸಚಿವರೊಂದಿಗೆ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದ್ದರು. ಸೋಮವಾರ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಸಾಧ್ಯವಾಗಲಿಲ್ಲ. ಇಂದಾದರೂ ಉತ್ತರ ಕೊಡಿಸಿ ಎಂದು ಸದನದಲ್ಲಿ ಕಲಾಪದ ವೇಳೆ ಆಗ್ರಹಿಸಿದ್ದಾರೆ.





