
ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವತಿಯಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ‘ ಕ್ರಿಯೇಟಿವ್ ಕೆಸರ್ಡೊಂಜಿ ದಿನ ‘ ಹಸಿರಿನೊಡನೆ ಕಲಿಕೆಯ ಕಾರ್ಯಕ್ರಮವನ್ನು 5 ಆಗಸ್ಟ್ 2025 ರಂದು ಹಿರ್ಗಾನ ಗ್ರಾಮದ ಬೆಂಗಾಲ್ ಗದ್ದೆಯಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ರಾಜ್ಯಾಧ್ಯಕ್ಷರು, ಫೆಡರೇಷನ್ ಆಫ್ ಕ್ವಾರಿ ಮತ್ತು ಕ್ರಷರ್ ಓನರ್ಸ್ ಅಸೋಸಿಯೇಷನ್ (ರಿ) ಬೆಂಗಳೂರು ಇವರು ಉದ್ಘಾಟನಾ ಭಾಷಣದಲ್ಲಿ ಪ್ರಕೃತಿಯ ಮಹತ್ವ, ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆ ಮತ್ತು ಯುವ ಪೀಳಿಗೆಗೆ ಉತ್ತಮವಾದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಅಗತ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಸಭೆಯನ್ನು ಉದ್ದೇಶಿಸಿ ಮಾತುಗಳನ್ನಾಡಿದರು . “ಕೆಸರಿನಲ್ಲಿ ಆಡೋದು ಕೇವಲ ಆಟವಲ್ಲ, ಅದು ಒಂದು ಅನುಭವ, ಜೀವನಕ್ಕೆ ಪಾಠ ಕಲಿಸುವ ಕ್ರಿಯೆ”ಎಂದು ತಿಳಿಸಿದರು. ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ. ಬಿ. ರವರು ಪ್ರಾಸ್ತಾವಿಕ ನುಡಿಗಳನ್ನಡುತ್ತಾ ನಮ್ಮ ಸಂಸ್ಥೆಯ ವಿದ್ಯಾರ್ಥಿ ಗಳಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿರುವ ಉದ್ದೇಶಗಳ ಬಗ್ಗೆ ತಿಳಿಸುತ್ತಾ, ಆಗಮಿಸಿದ ಸರ್ವರನ್ನು ಸ್ವಾಗತಿಸಿದರು . ಸ್ಥಳ ದಾನಿ ಯೋಗೀಶ್ ಕಿಣಿ, ಶಿಕ್ಷಕರು, ಸ.ಕಿ.ಪ್ರಾ ಶಾಲೆ ಪಲಾಯಿ ಬಾಕ್ಯಾರು, ತೆಳ್ಳಾರು ಇವರು ಸಭೆಯನ್ನು ಉದ್ದೇಶಿಸಿ “ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಕ್ರೀಡೆ, ಮಣ್ಣು, ಪ್ರಕೃತಿಯ ಸಂಪರ್ಕ ಕಡಿಮೆ ಆಗುತ್ತಿದೆ. ಇಂತಹ ಕೆಸರ್ಡೊಂಜಿ ದಿನ ಕಾರ್ಯಕ್ರಮಗಳು ಮಕ್ಕಳಿಗೆ ನೈಜ ಅನುಭವಗಳನ್ನು ನೀಡುವ ಮೂಲಕ ಪ್ರಕೃತಿಯೊಂದಿಗೆ ಅವರ ಸಂಬಂಧವನ್ನು ಪುನರ್ ಸ್ಥಾಪಿಸುತ್ತದೆ” ಎಂದು ತಿಳಿಸಿದರು. ಸಹ ಸಂಸ್ಥಾಪಕರಾದ ಆದರ್ಶ ಎಂ.ಕೆ ಹಾಗೂ ಹಿರ್ಗಾನ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಉದ್ಯಮಿಗಳಾದ ಸರ್ವೋತ್ತಮ ಕಡಂಬರವರು ಈ ಕಾರ್ಯಕ್ರಮದ ತಾತ್ಪರ್ಯವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಿರ್ಗಾನ ಗ್ರಾಮದ ಪ್ರಗತಿಪರ ಕೃಷಿಕರಾದ ಶ್ರೀ ಸತ್ಯನಾರಾಯಣ ಪಡ್ರೆ, ಶ್ರೀ ಸದಾನಂದ ಶೆಟ್ಟಿಗಾರ್, ವಿಠಲ್ ನಾಯಕ್ ಇವರನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭಕ್ಕೆ ಆಗಮಿಸಿದ ಎಲ್ಲರಿಗೂ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಖಾದ್ಯಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ಕೆಸರು ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಸಮಾರೋಪ
ಅಪರಾಹ್ನ ಸಮಯ ಸಂಜೆ 4:00 ಗಂಟೆಗೆ ಸಮಾರೋಪ ಕಾರ್ಯಕ್ರಮ ಜರುಗಿತು. ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು ಆಗಮಿಸಿದ ಸರ್ವರನ್ನು ಸ್ವಾಗತಿಸುತ್ತ ಕಾರ್ಯಕ್ರಮ ಯಶಸ್ವಿಗೆ ಕಾರಣರಾದ ಎಲ್ಲರನ್ನು ಸ್ಮರಿಸಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಸಂಸ್ಥಾಪಕರಲ್ಲಿ ಓರ್ವರಾದ ಶ್ರೀ ವಿಮಲ್ ರಾಜ್. ಜಿ. ರವರು “ಗ್ರಾಮೀಣ ಜೀವನ ಶೈಲಿಯು ಪಾಠ ಪುಸ್ತಕದ ಹೊರಗಿನ ಶಿಕ್ಷಣವನ್ನು ನೀಡುತ್ತದೆ. ಆಧುನಿಕ ದಿನಚರಿಯಲ್ಲಿ ಮಕ್ಕಳಿಗೆ ಶಾರೀರಿಕ ಚಟುವಟಿಕೆ ಕಡಿಮೆಯಾಗಿದೆ. ಆದರೆ ಈ ಕೆಸರಿನ
ಆಟಗಳು ಕೇವಲ ಮನರಂಜನೆ ಮಾತ್ರವಲ್ಲ, ಶಕ್ತಿಯ ಪೂರಕವೂ ಹೌದು” ಎಂದು ನುಡಿದರು.