
ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರವು ಟೋಲ್ ಪ್ಲಾಜಗಳಲ್ಲಿ ನಿರ್ವಹಣೆ ಇಲ್ಲದ ಕೊಳಕು ಶೌಚಾಲಯ ಬಳಸಬೇಕಾದ ಅನಿವಾರ್ಯತೆಗೆ ಪರಿಹಾರ ಕಂಡುಹಿಡಿದಿದೆ. ಅದೇನೆಂದರೆ ಅ. 31ರವರೆಗೆ ಟೋಲ್ ಪ್ಲಾಜಾಗಳಲ್ಲಿನ ಕೊಳಕು ಶೌಚಾಲಯಗಳ ಬಗ್ಗೆ ವರದಿ ಮಾಡಲು ಸಾರ್ವಜನಿಕರಿಗೆ ಅವಕಾಶ ನೀಡಿದ್ದು ಈ ರೀತಿ ವರದಿ ಮಾಡುವ ಜನರ ಫಾಸ್ಟ್ ಬ್ಯಾಗ್ ಖಾತೆಗಳಿಗೆ 1,000 ರೂಗಳಷ್ಟು ಮೊತ್ತವನ್ನು ಬಹುಮಾನವಾಗಿ ನೀಡಲಿದೆ.
ಎನ್ಎಚ್ಎಐ ಪ್ರಾಧಿಕಾರದ ‘ರಾಜ್ ಮಾರ್ಗ ಯಾತ್ರಾ’ ಆಪ್ ನಲ್ಲಿ ಜಿಯೋ ಟ್ಯಾಗ್ ಮಾಡಿದ ಕೊಳಕು ಶೌಚಾಲಯಗಳ ಚಿತ್ರಗಳನ್ನು ಅಪ್ಲೋಡ್ ಮಾಡಿ ತಮ್ಮ ಹೆಸರು, ಸ್ಥಳ, ವಾಹನ ನೋಂದಣಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನಮೂದಿಸಬೇಕು. ಇದರ ಸತ್ಯಾಸತ್ಯತೆ ಪರಿಶೀಲನೆಯಾದ ಕೂಡಲೇ ವರದಿ ಮಾಡಿದವರ ವಾಹನ ಸಂಖ್ಯೆಗೆ ಲಿಂಕ್ ಆಗಿರುವ ಫಾಸ್ಟ್ ಟ್ಯಾಗ್ ಖಾತೆಗೆ 1000 ರೂ ಹಣ ರಿಚಾರ್ಜ್ ಆಗಲಿದೆ.
ಪ್ರಾಧಿಕಾರದ ಅಧೀನದಲ್ಲಿರುವ ಶೌಚಾಲಯಗಳಿಗಷ್ಟೇ ಈ ನಿಯಮ ಅನ್ವಯವಾಗಲಿದ್ದು ಒಂದೇ ಶೌಚಾಲಯದ ಫೋಟೋ ಹಲವಾರು ಮಂದಿ ಕಳುಹಿಸಿದರೆ ಈ ಪೈಕಿ ಮೊದಲು ಕಳುಹಿಸಿದವರಿಗೆ ಆದ್ಯತೆ ನೀಡಲಾಗುತ್ತದೆ. ಅಕ್ಟೋಬರ್ 31ರವರೆಗೆ ಒಂದು ಬಾರಿ ಅಷ್ಟೇ ರಿಚಾರ್ಜ್ ಬಹುಮಾನ ಪಡೆಯಬಹುದಾಗಿದೆ.









