
ಮಡಿಕೇರಿ: ಕಂದಾಯ ಖಾತೆ ಸಚಿವ ಕೃಷ್ಣ ಬೈರೇಗೌಡ ಪೊನ್ನಂಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಏನು ಕಡಲೇಕಾಯಿ ತಿನ್ನುತ್ತಿದೆಯಾ? ಅವರಿಗೆ ರೈತರ ಕುರಿತು ಜವಾಬ್ದಾರಿ ಇಲ್ಲವೇ? ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಸಭೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸುತ್ತಿದೆ. ಆದರೆ ಕೇಂದ್ರ ಕೃಷಿ ಸಚಿವರು ಈ ಕುರಿತು ಒಂದೂ ಸಭೆ ಮಾಡಿಲ್ಲ. ಪ್ರಧಾನಿ ಮೋದಿ ಟ್ವೀಟ್ ಮಾಡಿಲ್ಲ. ನ್ಯಾಯಯುತ ಮತ್ತು ಲಾಭದಾಯಕ ದರವನ್ನು ನಿಗದಿ ಮಾಡುವುದು, ಸಕ್ಕರೆ ಆಮದು, ರಫ್ತು ನಿಯಮ ಮಾಡುವುದು, ಎಥೆನಾಲ್ ಅನ್ನು ಎಷ್ಟು ಬಳಕೆ ಮಾಡಬೇಕು ಎಂದು ತಿರ್ಮಾನ ಮಾಡುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರ ಅಲ್ಲ. ರಫ್ತು, ಆಮದು ನೀತಿಯು ಕಬ್ಬಿನ ದರದ ಮೇಲೆ , ರೈತರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಎಲ್ಲಾ ತೀರ್ಮಾನಗಳು ಕೇಂದ್ರದ ಕೈಯಲ್ಲಿ ಇವೆ. ಅಧಿಕಾರವೂ ಅವರ ಕೈಯಲ್ಲಿದೆ. ಜವಾಬ್ದಾರಿ ಮಾತ್ರ ಬೇರೆಯವರ ಮೇಲೆ ಎಂದರೆ ಹೇಗೆ ಸಾಧ್ಯ? ಅಧಿಕಾರ ಯಾರ ಕೈಯಲ್ಲಿ ಇದೆ ಅವರು ಜವಾಬ್ದಾರಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು. ಈ ಕುರಿತು ಪ್ರಧಾನಿಯವರು ಪ್ರತಿಕ್ರಿಯಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.







