
ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರದ ಜಿಎಸ್‌ಟಿ ಕಡಿತ ನಿರ್ಧಾರದಿಂದ ರಾಜ್ಯಕ್ಕೆ ಸುಮಾರು 70 ಸಾವಿರ ಕೋಟಿ ರು. ನಷ್ಟವಾಗಬಹುದು ಎಂದು ಹೇಳಿದ್ದಾರೆ.
ಕೇಂದ್ರ ಜಿಎಸ್‌ಟಿ ಕಡಿತ ಮಾಡಿರುವುದು ಸ್ವಾಗತಾರ್ಹ. ಕೆಲ ಅಗತ್ಯ ವಸ್ತುಗಳಿಗೆ ಶೇ.0 ಅಥವಾ ಶೇ.5 ಜಿಎಸ್ಟಿ ಮಾಡಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಕೆಲ ವಸ್ತುಗಳ ಮೇಲಿನ ಜಿಎಸ್ಟಿ ದರಗಳು ಹೆಚ್ಚೇ ಇವೆ. ಸಾಮಾನ್ಯ ಜನರಿಗೆ ತಲುಪುವ ಪದಾರ್ಥಗಳಿಗೆ ಕಡಿಮೆ ಜಿಎಸ್‌ಟಿ ಇರಬೇಕು ಅಥವಾ ಇರಬಾರದು. ಅಂತಹ ಪದಾರ್ಥಗಳಿಗೂ ಹೆಚ್ಚು ಜಿಎಸ್‌ಟಿ ಹಾಕಿದ್ದರು. ಬಹುಶಃ ಕೇಂದ್ರ ಸರ್ಕಾರಕ್ಕೆ ಈಗ ಸಾಮಾನ್ಯ ಜನರ ಸಮಸ್ಯೆ ಮನವರಿಕೆಯಾಗಿರಬೇಕು ಎಂದರು.
ಜಿಎಸ್‌ಟಿ ಸರಳೀಕರಣ ಮಾಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಗ್ರಹವೂ ಆಗಿತ್ತು. ಕಳೆದ ಕೆಲ ವರ್ಷಗಳಿಂದ ಜಿಎಸ್‌ಟಿ ಕಡಿತ ಮಾಡುವಂತೆ ನಾವು ಒತ್ತಾಯಿಸುತ್ತಲೇ ಬಂದಿದ್ದೆವು. ಇದೀಗ ಕೇಂದ್ರ ಸರ್ಕಾರ ಜಿಎಸ್‌ಟಿ ಸರಳೀಕರಣ ನಿರ್ಧಾರ ಮಾಡಿರುವುದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.