
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ‘ಕೆಡಿ’ ಚಿತ್ರದ ವಿರುದ್ಧ ಹೊಸ ವಿವಾದ ತಲೆದೋರಿದೆ. ‘ಸರ್ಕೆ ಚುನರ್ ತೇರಿ ಸರ್ಕೆ’ ಹಾಡಿನಲ್ಲಿ ಅಶ್ಲೀಲತೆ ಇದೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಡಾ. ಪುಂಡಿತ್ರಾವ್ ಧರೆನವರ್ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ದೂರು ಸಲ್ಲಿಸಿದ್ದಾರೆ.
ಹಾಡಿನ ಸಾಹಿತ್ಯದಲ್ಲಿ ದ್ವಂದ್ವ ಅರ್ಥದ ಪದಗಳು ಹಾಗೂ ಅಶ್ಲೀಲ ನೃತ್ಯ ಹೆಜ್ಜೆಗಳು ಇರುವುದರಿಂದ ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜೊತೆಗೆ, ಹಾಡಿನಲ್ಲಿ ಮದ್ಯಪಾನವನ್ನು ವೈಭವಿಕರಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಇಂತಹ ವಿಷಯಗಳು ಯುವಜನತೆ ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಕಳವಳ ವ್ಯಕ್ತಪಡಿಸಿರುವ ಅವರು, ಚಿತ್ರದ ಹಿಂದಿ ಆವೃತ್ತಿಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಹಾಡು ಸೇರಿದಂತೆ ಚಿತ್ರ ಬಿಡುಗಡೆಯಾದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರದ ಬಗ್ಗೆ ಈಗ ಸೆನ್ಸಾರ್ ಮಂಡಳಿ ಹಾಗೂ ಚಿತ್ರತಂಡದ ಪ್ರತಿಕ್ರಿಯೆ ಏನಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
















































