
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಂಟು ಪ್ರಮುಖ ರಸ್ತೆಗಳಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದ ಬಳಿಕ ಭಾಷಣ ಮಾಡಿದ್ದು ಈ ವೇಳೆ ಸಬಿಕರೊಬ್ಬರು ಡೀಸೆಲ್, ಪೆಟ್ರೋಲ್ ಕಡಿಮೆ ಮಾಡಬೇಕೆಂದು ಕೂಗಾಡಿದ್ದಾರೆ. ಈ ವೇಳೆ ಸಿಎಂ ನಾನಲ್ಲ, ನೀನು ಹೇಳಬೇಕು. ಮೋದಿಗೆ ವೋಟ್ ಒತ್ತಿದ್ಯಲ್ಲ ಅವಾಗ ನೆನಪು ಆಗಿಲ್ಲವಾ ನಿನಗೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ತೆರಿಗೆ ನೀತಿಗಳ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಜಿಎಸ್ಟಿ ವ್ಯವಸ್ಥೆ ಆರಂಭಿಸಿದವರು ಮೋದಿ. ನಾಲ್ಕು ರೇಟ್‌ಗಳನ್ನು ಮಾಡಿದ್ದು ಅವರೇ. ಈಗ ಎರಡು ರೇಟ್‌ಗಳನ್ನು ಮಾಡಿದ್ದಾರೆ. ಎಂಟು ವರ್ಷಗಳಿಂದ ತೆರಿಗೆ ವಸೂಲಿ ಮಾಡುತ್ತಿದ್ದರೂ ಕರ್ನಾಟಕಕ್ಕೆ ಬಾಕಿಯಾದ ₹15,000 ಕೋಟಿ ನೀಡಿಲ್ಲ. ಈ ಹಣದಿಂದ ರಾಜ್ಯದ ಅಭಿವೃದ್ಧಿ ಕೆಲಸಗಳಲ್ಲಿ ವಿಳಂಬ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ದಿನೇಶ್ ಗುಂಡೂರಾವ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಜಿಬಿಎ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



















































