ಕಾರ್ಕಳ: ಮಂಗಳೂರಿನಿಂದ ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಗುರುವಾರ ಚಾಲನೆ ನೀಡಲಾಯಿತು. ಇದರಿಂದಾಗಿ ಈ ಪರಿಸರದ ಮಹಿಳೆಯರ ಹಾಗೂ ಕಾರ್ಮಿಕರ ಬಹು ವರ್ಷಗಳ ಬೇಡಿಕೆ ಈಡೇರಿದೆ.
ಸರಕಾರಿ ಸಾರಿಗೆ ವಿರಳ:
ಮಂಗಳೂರು ಮತ್ತು ಉಡುಪಿ ನಗರಗಳಲ್ಲಿ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್‌ಗಳಿದ್ದರೂ, ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಅವಿಭಜಿತ ದ.ಕ –ಉಡುಪಿ ಜಿಲ್ಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಖಾಸಗಿ ಸರ್ವಿಸ್ ಬಸ್‌ಗಳಿದ್ದು, ಅವು ಸಾವಿರಕ್ಕೂ ಹೆಚ್ಚು ಟ್ರಿಪ್‌ಗಳನ್ನು ನಡೆಸುತ್ತಿವೆ.
ಸರಕಾರಿ ಬಸ್ಸಿಗೆ ಒತ್ತಾಯ:
ಶಕ್ತಿ ಯೋಜನೆ ಜಾರಿಯ ಘೋಷಣೆಯಾಗುತ್ತಿದ್ದಂತೆಯೇ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರಕಾರಿ ಬಸ್‌ಗಳ ಸಂಖ್ಯೆ ಹೆಚ್ಚಿಸುವಂತೆ ವಿವಿಧ ವರ್ಗದವರಿಂದ ಒತ್ತಡ ಆರಂಭವಾಗಿತ್ತು. ಹಲವು ಸಂಘಟನೆಗಳು ಪ್ರತಿಭಟನೆಗಳು ನಡೆಸಿದ್ದವು. ಇನ್ನೊಂದೆಡೆ ಸರಕಾರಿ ಬಸ್‌ಗಳನ್ನು ಹೆಚ್ಚಿಸಿ, ಜಿಲ್ಲೆಯ ಮಹಿಳೆಯರಿಗೂ ಶಕ್ತಿ ಯೋಜನೆಯ ಲಾಭ ಸಿಗುವಂತೆ ಮಾಡಿ ಎಂದು ರಾಜಕೀಯ ಪಕ್ಷಗಳ ಮುಖಂಡರು ಒತ್ತಾಯಿಸಿದ್ದರು.
ಖಾಸಗಿ ಮೇಲೆಯೇ ಅವಲಂಬನೆ:
ಕಾರ್ಕಳ-ಮೂಡಬಿದ್ರಿ-ಮಂಗಳೂರು ಮಾರ್ಗದಲ್ಲಿ ಖಾಸಗಿ ಬಸ್ ಸೇವೆಯೇ ಪರಿಣಾಮಕಾರಿಯಾಗಿತ್ತು. ಈ ಮಾರ್ಗದಲ್ಲಿ ಸರಕಾರಿ ಬಸ್ ಸೇವೆ ಲಭ್ಯವಿರಲಿಲ್ಲ. ಕಾರ್ಕಳ-ಮೂಡಬಿದ್ರಿ ಮೂಲಕ ಧರ್ಮಸ್ಥಳಕ್ಕೆ ಮಾತ್ರ ಬಸ್ ಸೇವೆ ಇದೆ. ಇದೀಗ ಮೂಡಬಿದ್ರಿ ಮೂಲಕ ಮಂಗಳೂರಿಗೆ ಸರಕಾರಿ ಬಸ್ ಆರಂಭಗೊಂಡ ಹಿನ್ನಲೆಯಲ್ಲಿ ಇಲ್ಲಿನ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್ ಈ ಬಗ್ಗೆ ಪ್ರಸ್ತಾಪಿಸಿದ್ದು, ಅಂತೂ ಬಸ್ ಆಗಮಿಸಿದಂತಾಗಿದೆ, ಈ ಮಾರ್ಗದಲ್ಲಿ ಸರಕಾರಿ ಬಸ್ಸುಗಳನ್ನು ಸಂಚರಿಸುವಂತೆ ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ರಾಜ್ಯ ಸರಕಾರದ ಈ ಯೋಜನೆಯನ್ನು ಶೀಘ್ರ ಅನುಷ್ಠಾನಕ್ಕಾಗಿ ಧ್ವನಿ ಎತ್ತಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಆಗ್ರಹಿಸಿ ಹೋರಾಟವನ್ನು ಕೂಡ ನಡೆಸಿತ್ತು.
ಬಸ್ ಎಷ್ಟೊತ್ತಿಗೆ ಓಡಾಡ್ತದೆ? ವೇಳಾಪಟ್ಟಿ ಇಲ್ಲಿದೆ..
ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಮೊದಲ ಬಸ್ಸು ಬೆಳಿಗ್ಗೆ 6:45 ಕ್ಕೆ ಹೊರಟು ನಂತೂರು, ಗುರುಪುರ, ಕೈಕಂಬ, ಎಡಪದವು, ಮೂಡಬಿದ್ರಿ, ಬೆಳುವಾಯಿ ಮೂಲಕ ಕಾರ್ಕಳಕ್ಕೆ ತೆರಳಲಿದೆ.
ಕಾರ್ಕಳದಿಂದ ಮೊದಲ ಬಸ್ಸು ಬೆಳಿಗ್ಗೆ 6:45ಕ್ಕೆ ಹೊರಟು ಬೆಳುವಾಯಿ, ಮೂಡಬಿದ್ರಿ, ಎಡಪದವು, ಕೈಕಂಬ, ಗುರುಪುರ, ನಂತೂರು ಮೂಲಕ ಮಂಗಳೂರು ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ತಲುಪಲಿದೆ.
ಮಂಗಳೂರಿನಿಂದ ಕಾರ್ಕಳಕ್ಕೆ ಬೆಳಿಗ್ಗೆ 6:45, 8:30, 10:30, 12:15, 15:15, 16:00, 17:45 ಹೊರಡಲಿದ್ದು, ಕಾರ್ಕಳದಿಂದ ಮಂಗಳೂರಿಗೆ ಬೆಳಿಗ್ಗೆ 6:45, 8:30, 10:30, 12:15,14:15, 16:00, 17:45 ಹೊರಡಲಿದು, ಪ್ರಾಯೋಗೀಕವಾಗಿ ಬಸ್ಸ್ ಸಂಚಾರ ಗುರುವಾರ ಆರಂಭಗೊಂಡಿದೆ.
ಬಸ್ಸ್ನಲ್ಲಿ ಓರ್ವ ಸಿಬ್ಬಂದಿ, ಟೈಮ್ ಕೀಪರ್ ಹಾಗೂ ಬಸ್ ತಂಗುದಾಣದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಿದ್ದು, ಸದ್ಯ ಮಂಗಳೂರು ಮತ್ತು ಕಾರ್ಕಳದಿಂದ ತಲಾ ಎರಡು ಬಸ್‌ಗಳು ಸಂಚರಿಸಲಿವೆ ಎಂದು ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.