
ಕಾರ್ಕಳ ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಮಿಕಲ್ ಕುಂಜದಲ್ಲಿನ ಪರಶುರಾಮ ಮೂರ್ತಿಯನ್ನು ಸಂಪೂರ್ಣ ನಕಲಿ ಮಾಡಲಾಗಿದ್ದು, ಅದನ್ನು ಧಾರ್ಮಿಕತೆಯ ಮೂಲಕ ಪುನರ್ ನಿರ್ಮಾಣ ಮಾಡಲು ಜವಾಬ್ದಾರಿಯುತ ಸಂಘಗಳ ಮೂಲಕ ಪ್ರಯತ್ನ ಮಾಡಿದರೆ ಸರಕಾರದ ಮಟ್ಟದಲ್ಲಿ ಅಲ್ಲಿನ ಸ್ಥಳ ಮಂಜೂರು ಮಾಡಲು ಸಂಪೂರ್ಣ ಪ್ರಯತ್ನ ಮಾಡುವೆ ಎಂದು ಕಾಂಗ್ರೇಸ್ ನಾಯಕ ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪರಶುರಾಮ ಮೂರ್ತಿಯನ್ನು ನಕಲಿ ಮಾಡುವ ಮೂಲಕ ವಿಶ್ವ ಮಟ್ಟದಲ್ಲಿ ಕಾರ್ಕಳದ ಮಾನ ಕಳೆಯಲಾಗಿದೆ ಎಂದು ಹೇಳಿದ್ದಾರೆ.
ಪರಶುರಾಮರ ಮೂರ್ತಿ ಕಾರ್ಕಳದಲ್ಲಿ ನಿರ್ಮಾಣ ಆಗುತ್ತದೆ ಎಂದಾಗ ನಾನು ಬಹಳ ಸಂತಸ ಪಟ್ಟಿದ್ದೆ. ಆದರೆ ಪರಶುರಾಮರ ಮೂರ್ತಿಯನ್ನು ಫೈಬರ್ ಮಾಡುವ ಮೂಲಕ ಧಾರ್ಮಿಕತೆಗೆ ಅಪಚಾರ ಮಾಡಲಾಯಿತು. ಪ್ರವಾಸೋದ್ಯಮ ಎಂದು ಜನರನ್ನು ನಂಬಿಸಿ ಗೋ ಮಾಳ ಜಾಗವನ್ನು ಯಾವುದೇ ಮಂಜೂರಾತಿ ಇಲ್ಲದೆ ಪರಶುರಾಮ ಮೂರ್ತಿ ನಿರ್ಮಾಣಕ್ಕೆ ನೀಡಲಾಯಿತು.
ಆಗಿನ ಸಚಿವ ಸುನಿಲ್ ಕುಮಾರ್ ರ ಒತ್ತಡಕ್ಕೆ ಹೆದರಿದ ಅಧಿಕಾರಿಗಳು ಈ ಫೈಬರ್ ಮೂರ್ತಿ ನಿರ್ಮಾಣಕ್ಕೆ ಗೋ ಮಾಳ ಸ್ಥಳವನ್ನೇ ನೀಡಿದ್ದಾರೆ. ಇದು ಧಾರ್ಮಿಕತೆಯಲ್ಲಿ ಬಹಳ ನೋವಿನ ವಿಚಾರ. ಸಚಿವರ ಆರ್ಭಟಕ್ಕೆ ಅಧಿಕಾರಿ ಹಾಗು ಶಿಲ್ಪಿಯ ತಲೆ ದಂಡ ಆಗಿರುವುದು ಬಹಳ ನೋವಿನ ವಿಚಾರ.
ಧಾರ್ಮಿಕತೆ ಉಳಿಸಲು ನಾವೇನು ಮಾಡಬೇಕು
ಯಾವುದೇ ಒಂದು ಕೆಲಸ ಆಗಬೇಕಾದರೂ ಕೂಡ ಪೂಜೆ ಪುನಸ್ಕಾರ ಮಾಡಬೇಕಾದುದು ಧರ್ಮ. ಆದರೆ ಉಮಿಕಲ್ ಕುಂಜದಲ್ಲಿ ದೈವಗಳು ನೆಲೆಸಿದ್ದಾರೆ ಕೋಟಿ ಚೆನ್ನಯರ ಪಾದಗಳು ಇವೆ ಎಂಬ ಹಿರಿಯರ ಮಾತಿಗೆ ಮನ್ನಣೆ ನೀಡದೆ ಅಲ್ಲಿನ ಬೃಹತ್ ಕಲ್ಲನ್ನು ಒಡೆದು ತೆಗೆಯಲಾಗಿದೆ. ಮೂರ್ತಿ ನಿಲ್ಲಿಸುವ ಸಮಯದಲ್ಲಿ ಹಲವಾರು ಸಮಸ್ಯೆ ಬಂದದ್ದು ಅಲ್ಲಿನ ಸ್ಥಳ ವಿಶೇಷ ತಿಳಿದವರಿಗೆ ಮಾತ್ರ ಗೊತ್ತು. ಹೀಗಾಗಿ ಆ ಯೋಜನೆಯಿಂದ ಧರ್ಮ, ಆಚರಣೆ, ಸಂಸ್ಕೃತಿಗೆ ಧಕ್ಕೆ ಆಗಿದೆ.
ನಾವೇನು ಮಾಡಬೇಕು
ಇನ್ನು ಮುಂದಿನ ದಿನಗಳಲ್ಲಿ ಈ ಮೂರ್ತಿ ಪುನರ್ ನಿರ್ಮಾಣ ಆಗಬೇಕು. ಅದು ಕೂಡ ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ಮೂರ್ತಿ ನಿರ್ಮಾಣ ಕಾರ್ಯ ಪ್ರತಿಷ್ಠೆ ಆಗಬೇಕು.
ಗೋ ಮಾಳ ಇರುವ ಜಾಗವನ್ನು ಪರಿವರ್ತನೆ ಮಾಡಬೇಕು. ಬಿಜೆಪಿ ಅವಧಿಯಲ್ಲಿ 2 ಬಾರಿ ಈ ಸ್ಥಳವನ್ನು ಮೀಸಲು ಇರಿಸಲು ಆಗಿನ ಸರಕಾರಕ್ಕೆ ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಕಳದ ಸಚಿವರಿಗೆ ಮಾಡಲು ಆಗಿಯೇ ಇಲ್ಲ.
ಹೀಗಾಗಿ ಈ ಧಾರ್ಮಿಕ ವ್ಯವಸ್ಥೆಯನ್ನು ಇನ್ನೊಮ್ಮೆ ಜನಪರವಾಗಿಸಲು ಧರ್ಮ ಹಾಗು ಸಂಸ್ಕೃತಿ ಉಳಿಸುವ ಯಾವುದಾದ್ರೂ ಸಂಘಗಳು ಮುಂದೆ ಬಂದರೆ ಸರಕಾರದ ಮಟ್ಟದಲ್ಲಿ ಸ್ಥಳದ ಸಮಸ್ಯೆ ಪರಿಹಾರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡೋಣ. ಈಗ ಆ ಮೂರ್ತಿ ವಿಚಾರ ತನಿಖೆ ಹಂತದಲ್ಲಿದೆ. ಎಲ್ಲರಿಗೂ ಗೊತ್ತು. ಇದರ ಮಧ್ಯೆ ಸಮಸ್ಯೆ ಪರಿಹಾರಕ್ಕೆ ರೂಪು ರೇಷೆ ಹಾಕಿ ಕೊಳ್ಳೋಣ.
ಜನರನ್ನು ಸುಳ್ಳಿನ ಹಾದಿಯಲ್ಲಿ ನಡೆಸದೆ ಸತ್ಯದ ಮೂಲಕ ಯಶಸ್ಸನ್ನು ಕಾಣೋಣ ಎಂದು ಅವರು ಹೇಳಿದ್ದಾರೆ.