
ಕಾರ್ಕಳ: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿಯ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಕಾರ್ಕಳ ನೂರಾಳ್ ಬೆಟ್ಟು ಗ್ರಾಮದ ಗುಮ್ಮೆತ್ತು ನಿವಾಸಿ ಸುನೀಲ್ ಕುಮಾರ್ (44) ಬಂಧಿತ ಆರೋಪಿಯಾಗಿದ್ದು ಈತ ಜ.27ರಂದು ಬೆಳಗ್ಗೆ ಪತ್ನಿ ಗೀತಾಳೊಂದಿಗೆ ಕೌಟುಂಬಿಕ ವಿಷಯದ ಕುರಿತು ವಾಗ್ವಾದ ಉಂಟಾಗಿ, ಬಳಿಕ ಗಲಾಟೆಯಾಗಿ ಮಾರ್ಪಟ್ಟಿದೆ. ಈ ಸಂದರ್ಭ ಪತ್ನಿ ಗೀತಾ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು ಇದರಿಂದ ಗಂಭೀರ ಗಾಯಗೊಂಡ ಗೀತಾಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯ ಬಳಿಕ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಭಾಗವಾಗಿ ಆರೋಪಿತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದ ಗೀತಾ ಅವರು ಫೆ.02ರಂದು ಬೆಳಗಿನ ಜಾವ 5:46ರ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲಿಗೆ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.



















