
ಕಾರ್ಕಳ: ತಾಲೂಕಿನ ಸುತ್ತಮುತ್ತ ಗೋಕಳ್ಳತನ ಮತ್ತು ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು ನ. 11 ರಂದು ನಲ್ಲೂರು ಗ್ರಾಮದ ಬಸದಿ ರಸ್ತೆಯ ಹಿನಾ ಮಂಜಿಲ್ ಎಂಬಲ್ಲಿ ನಡೆದಿರುವ ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣಾ ಪೋಲೀಸರು ಇಂದು ಅದೇ ಗ್ರಾಮದ ಶಿವಪ್ರಸಾದ್ ಎಂಬಾತನನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ:
ನವೆಂಬರ್ 11ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಎಸ್ಐ ಪ್ರಸನ್ನ ಎಂ.ಎಸ್ ಅವರು ನಲ್ಲೂರಿನ ಅಶ್ರಫ್ ಗೆ ಸೇರಿದ ತೋಟದಲ್ಲಿ ಗೋ ಹತ್ಯೆ ನಡೆದಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದು ಈ ವೇಳೆ ಆರೋಪಿತರಾದ ಅಶ್ರಫ್ ಆಲಿ, ಅಫ್ತಾಬ್, ರುಕ್ಸರ್ ಆಲಿ ಮತ್ತು ಇತರರು ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳವು ಮಾಡಿ ಹತ್ಯೆ ಮಾಡಿ ಮಾಂಸ ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಮಾರಾಟ ಮಾಡಲು ಬಳಸಿದ ವಾಹನ ಮತ್ತು ಹಿನಾ ಮಂಜಿಲ್ ಎಂಬ ಮನೆಯಲ್ಲಿ ಇಟ್ಟಿದ್ದ 98 ಕೆಜಿ ಮಾಂಸವನ್ನು ಹಾಗೂ ಹತ್ಯೆ ಮಾಡಲು ಬಳಸಿದ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿ ರುಕ್ಸಾರ್ ಆಲಿಯನ್ನು ಕೂಡ ಬಂಧಿಸಿದ್ದರು. ಅಶ್ರಫ್ ಅಲಿ ಮತ್ತು ಅಫ್ತಾಬ್ ಜಾಮೀನು ಪಡೆದುಕೊಂಡಿದ್ದು ಇದೀಗ ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಇನ್ನೊಬ್ಬ ಆರೋಪಿ ನಲ್ಲೂರಿನ ಶಿವಪ್ರಸಾದ್ ಎಂಬಾತನನ್ನು ಇಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.





