
ಕಾರ್ಕಳ : ವಿದ್ಯಾರ್ಥಿಗಳ ತಪ್ಪು ಒಪ್ಪುಗಳನ್ನು ತಿದ್ದಿ ತೀಡಿ ಜವಾಬ್ದಾರಿಯ ಬಗ್ಗೆ ಕಲಿಸಿ ವಿದ್ಯಾರ್ಥಿಗಳ ಜೀವನ ಹಸನಾಗಿರಲೆಂದು ಹಾರೈಸಿ, ಅದಕ್ಕೆ ಪೂರಕವಾದ ಶಿಕ್ಷಣ ಕೊಟ್ಟು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳೇ ಶಿಕ್ಷಕರು . ಅಂಕಗಳ ಜೊತೆಗೆ ಮಕ್ಕಳಲ್ಲಿ ಜೀವನ ಮೌಲ್ಯಗಳ ಅರಿವನ್ನು ಮೂಡಿಸುವವರು ಶಿಕ್ಷಕರು.ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕಾದರೆ ಅವನ ಹಿಂದೆ ಗುರುವಿನ ಪಾತ್ರ ಇದ್ದೇ ಇರುತ್ತದೆ. ಗುರುವಿಲ್ಲದೆ ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂದು ಎಸ್. ವಿ. ಟಿ. ಮಹಿಳಾ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆಯಾಗಿರುವ ಶ್ರೀಮತಿ ಶ್ಯಾಮಲ ಕುಮಾರಿ ಬೇವಿಂಜೆ ಹೇಳಿದರು. ಇವರು ಕಾರ್ಕಳ ಜ್ಞಾನಸುಧಾ ಪ್ರೌಢಶಾಲೆ ಗಣಿತನಗರದಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವ್ಯಕ್ತಿಯ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಗುರುವಿಗೆ ನೀಡಲಾಗುತ್ತದೆ. ಶಿಕ್ಷಣದ ಮೂಲಾರ್ಥವನ್ನು ತಿಳಿಸಿ ವ್ಯಕ್ತಿಯ ಬದುಕನ್ನು ಬೆಳಗುವವರು
ಶಿಕ್ಷಕರಾಗಿರುವುದರಿಂದ ಶಿಕ್ಷಕರಿಗೆ ಪೂಜನೀಯ ಸ್ಥಾನ ನೀಡಲಾಗುತ್ತದೆ.ಇಂದು ನಮಗೆ ಶಿಕ್ಷಣ ನೀಡಿದ ಶಿಕ್ಷಕರಿಗೆ ಗೌರವವನ್ನು ಅರ್ಪಿಸುವ ಶುಭ ದಿನವಾಗಿದೆ ಎಂದು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾಗಿರುವ ಡಾ. ಸುಧಾಕರ ಶೆಟ್ಟಿಯವರು ಹೇಳಿದರು.
ಕಾಬೆಟ್ಟು ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸುಲೋಚನಾ, ಹೊಸ್ಮಾರು ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಪ್ರಭಾಚಂದ್ರ,
ಬೈಂದೂರು ತಾಲೂಕು ನಿವೃತ್ತ ದೈಹಿಕ ಪರಿವೀಕ್ಷಣಾಧಿಕಾರಿಯಾಗಿರುವ ಬಾಬು ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರಾದ ಬೈಂದೂರು ತಾಲೂಕು ನಿವೃತ್ತ ದೈಹಿಕ ಪರಿವೀಕ್ಷಣಾಧಿಕಾರಿಯಾಗಿರುವ ಬಾಬು ಪೂಜಾರಿ ಮಾತನಾಡಿ ಸಮಾಜಕ್ಕೆ ಉತ್ತಮ ನಾಗರೀಕರನ್ನು ಕೊಡುವ ಸೃಷ್ಟಿಕರ್ತರು ಗುರುಗಳು. ಜ್ಞಾನಸುಧಾ ಶಿಕ್ಷಣ ಸಂಸ್ಥೆಯು ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಕಾಬೆಟ್ಟು ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸುಲೋಚನಾ ಮಾತನಾಡಿ ಜೀವನಕ್ಕೆ ಭದ್ರಬುನಾದಿ ಹಾಕಿ ಜವಾಬ್ದಾರಿಯುತ ನಾಗರೀಕರನ್ನು ಸಮಾಜಕ್ಕೆ ನೀಡುವ ಶಿಕ್ಷಕರಿಗೆ ಗೌರವದ ಸ್ಥಾನವಿದೆ. ಜ್ಞಾನಸುಧಾ ಶಿಕ್ಷಣ ಸಂಸ್ಥೆಯು ಅತೀ ಕಡಿಮೆ ಅವಧಿಯಲ್ಲೇ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬಹಳಷ್ಟು ಸಾಧನೆಯನ್ನು ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಎಂ. ಕೊಡವೂರು ಜ್ಞಾನಸುಧಾ ಶಾಲೆ ಮತ್ತು ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ವಾಣಿ ಕೆ. ಕಾರ್ಕಳ ಜ್ಞಾನಸುಧಾದ ಸಾರ್ವಜನಿಕ ಸಂಪರ್ಕಧಿಕಾರಿಯಾಗಿರುವ ಜ್ಯೋತಿ ಪದ್ಮನಾಭ ಭಂಡಿ, ಡೀನ್ ಅಕಾಡೆಮಿಕ್ ಡಾ.ಮಿಥುನ್. ಯು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ವಿದ್ಯಾರ್ಥಿನಿ ಅದಿತಿ ಪ್ರಾರ್ಥಿಸಿದರು. ಶಿಕ್ಷಕಿ ವಿಜೇತರಾಣಿ ಕಾರ್ಯಕ್ರಮ ನಿರೂಪಿಸಿ, ಶೈಕ್ಷಣಿಕ ಸಲಹೆಗಾರರಾಗಿರುವ ಶ್ರೀಮತಿ ಕೀರ್ತಿ ಸ್ವಾಗತಿಸಿ, ಶ್ರೀಮತಿ ವೈಶಾಲಿ ಧನ್ಯವಾದವಿತ್ತರು.