
ಕಾರ್ಕಳ: ಉಚ್ಚಂಗಿ ಮಾರಿಯಮ್ಮ ದೇವಸ್ಥಾನ ಸಮೀಪ ಮುಖ್ಯರಸ್ತೆಯಲ್ಲಿ ಕಾರ್ಕಳ ಬಸ್ ನಿಲ್ದಾಣ ಕಡೆಗೆ ಬರುತ್ತಿದ್ದ ಬಸ್ ಚಾಲಕನಿಗೆ ಹಠಾತ್ ಆರೋಗ್ಯ ಸಮಸ್ಯೆ ಎದುರಾದರಿಂದ ಬಸ್ ನಿಯಂತ್ರಣ ತಪ್ಪಿ ರಿಕ್ಷಾಗೆ ಢಿಕ್ಕಿ ಹೊಡೆದ ಘಟನೆ ನ. 20ರ ಗುರುವಾರ ಸಂಭವಿಸಿದೆ.
ಗುರುವಾರ 3 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ರಿಕ್ಷಾ ಚಾಲಕ ರಸ್ತೆ ಬದಿ ರಿಕ್ಷಾ ನಿಲ್ಲಿಸಿ ಒಳಗೆ ಕುಳಿತಿದ್ದರು. ಈ ವೇಳೆ ಏಕಾಏಕಿ ಬಸ್ ಮುನ್ನುಗ್ಗಿ ಬಂದು ರಸ್ತೆ ಬದಿಯಲ್ಲಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ.
ಈ ಪರಿಣಾಮ ರಿಕ್ಷಾ ಚಾಲಕನ ತಲೆ, ಕೈ, ಕಾಲಿಗೆ ಗಾಯವಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೂ ಅಪಘಾತ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿದೆ. ಬಸ್ ಹಾಗೂ ರಿಕ್ಷಾ ಚಾಲಕನನ್ನು ಸ್ಥಳದಲ್ಲಿದ್ದವರು ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ರಸ್ತೆಯಲ್ಲಿ ಭಾರಿ ಜನ ಸಂದಣಿ ಇಲ್ಲದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು. ಢಿಕ್ಕಿ ಪರಿಣಾಮ ರಿಕ್ಷಾ-ಬಸ್ ಎರಡೂ ವಾಹನಗಳ ಮುಂಭಾಗ ಜಖಂಗೊಂಡಿದೆ.






















































