ಆಯೋಜಕರ ವಿರುದ್ಧ ದಾಖಲಾಗಿದ್ದ ದೂರಿಗೆ ಹೈಕೋರ್ಟ್‌ನಿಂದ ತಡೆ
ನ್ಯಾಯವಾದಿ ಮಹೇಂದ್ರ ಎಸ್. ಎಸ್. ಬೆಂಗಳೂರು ವಾದಕ್ಕೆ ಜಯ

ಕಾರ್ಕಳ : ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾರ್ಕಳ ಮುಂಡ್ಲಿ ಎಂಬಲ್ಲಿ ಜ. 14ರಂದು ಶ್ರೀ ಈಶ್ವರ ಯಕ್ಷಗಾನ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಯಕ್ಷಗಾನ ಆಯೋಜನೆಗೆ ಪಂಚಾಯತ್ ಪಿಡಿಓ ಅವರಿಂದ ಹಾಗೂ ಧ್ವನಿವರ್ದಕ ಬಳಕೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದು ಅಜೆಕಾರು ಪೊಲೀಸ್ ಠಾಣೆಯಲ್ಲಿ ಕಾರ್ಯಕ್ರಮ ಆಯೋಜಕರ ವಿರುದ್ಧ ಸ್ಥಳೀಯ ವ್ಯಕ್ತಿಯಿಂದ ದಾಖಲಾಗಿದ್ದ ದೂರಿಗೆ ಹೈಕೋರ್ಟ್ ತಡೆ ನೀಡಿದೆ.
ಶ್ರೀ ಈಶ್ವರ ಯಕ್ಷಗಾನ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ, ಅಜೆಕಾರು ಮಹಾಲಕ್ಷ್ಮೀ ಸೌಂಡ್ಸ್ ಮಾಲಕ ಅಪ್ಪು ನಾಯಕ್, ಮನೋಜ್ ಶೆಟ್ಟಿ, ಪ್ರಜ್ವಲ್ ಜೈನ್ ಹಾಗೂ ಆದರ್ಶ ಜೈನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಜು. 22ರಂದು ಹೈಕೋರ್ಟ್ ಪ್ರಕರಣಕ್ಕೆ ತಾತ್ಕಾಲಿಕವಾಗಿ ತಡೆ ನೀಡಿದೆ. ಹೈಕೋರ್ಟ್‌ನಲ್ಲಿ ನ್ಯಾಯವಾದಿ ಮಹೇಂದ್ರ ಎಸ್. ಎಸ್. ಬೆಂಗಳೂರು ವಾದ ಮಂಡಿಸಿದ್ದರು.
ಜ. 14ರಂದು ರಾತ್ರಿ ಮುಂಡ್ಲಿ ಗ್ರಾಮದಲ್ಲಿ ಶ್ರೀ ಈಶ್ವರ ಯಕ್ಷಗಾನ ಸಂಘದ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನವಾಗುತ್ತಿತ್ತು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಅಜೆಕಾರು ಠಾಣಾ ಪೊಲೀಸರು ಕಾರ್ಯಕ್ರಮ ಆಯೋಜನೆಗೆ ಮತ್ತು ಧ್ವನಿವರ್ಧಕಕ್ಕೆ ಅನುಮತಿ ಪಡೆದಿಲ್ಲವಾದ್ದರಿಂದ ಯಕ್ಷಗಾನವನ್ನು ನಿಲ್ಲಿಸುವಂತೆ ಸೂಚಿಸಿದ್ದರು. ಈ ವೇಳೆ ಗ್ರಾಮಸ್ಥರು ಪೊಲೀಸರ ವಿರುದ್ಧ ಆಕ್ರೋಶಗೊಂಡಿದ್ದರು. ಪ್ರತಿಕ್ರಿಯಿಸಿದ ಪೊಲೀಸ್ ಉಪನಿರೀಕ್ಷಕ ಶುಭಕರ ಅವರು ನಾವು ಮೇಲಾಧಿಕಾರಿಗಳ ಆದೇಶದಂತೆ ಆಗಮಿಸಿದ್ದೇವೆ. ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದಿಲ್ಲವಾದ್ದರಿಂದ ಯಕ್ಷಗಾನ ನಿಲ್ಲಿಸಬೇಕು ಎಂದಿದ್ದರು. ಯಾವುದೇ ಗೊಂದಲವಿಲ್ಲದೆ ಸಾಮರಸ್ಯದಿಂದ ಈ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಅಲ್ಲದೆ ಎಫ್‌ಐಆರ್ ಆಗದೇ ಹೇಗೆ ನಿಲ್ಲಿಸುತ್ತೀರಿ ಎಂದು ಗ್ರಾಮಸ್ಥರು ಪೊಲೀಸರನ್ನು ಪ್ರಶ್ನಿಸಿದಾಗ ಎಫ್‌ಐಆರ್ ಮಾಡಿಕೊಂಡು ಬರುವುದಾಗಿ ಪೊಲೀಸರು ಸ್ಥಳದಿಂದ ನಿರ್ಗಮಿಸಿದ್ದರು. ಆ ಬಳಿಕ ಐದು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಈ ಹಿಂದೆ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ಅವರು ಯಕ್ಷಗಾನ ಮತ್ತು ಇತರ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಇರುವ ಕಾನೂನುಗಳನ್ನು ಸರಳೀಕರಣಗೊಳಿಸಬೇಕೆಂದು ಮಾನ್ಯ ಗೃಹ ಸಚಿವರ ಗಮನ ಸೆಳೆದಿದ್ದರು. ಆಗ ಇದು ರಾಜ್ಯವ್ಯಾಪಿ ಸುದ್ದಿಯಾಗಿತ್ತು.
ರಾಜಕೀಯ ಪ್ರೇರಿತ ಓರ್ವ ವ್ಯಕ್ತಿ ಗ್ರಾಮದ ಕಾರ್ಯಕ್ರಮ ಹಾಳು ಮಾಡಲು ಪೊಲೀಸರಿಗೆ ದೂರು ನೀಡಿದ್ದರು ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಆದರೆ, ಇಂದು ಆರೋಪಿತರು ಎಂದು ಬಿಂಬಿಸಲಾಗಿದ್ದವರಿಗೆ ನ್ಯಾಯಾಲಯದಿಂದ ಸ್ಟೇ ದೊರೆತಿರುವುದು ಕರಾವಳಿಯ ಗಂಡು ಕಲೆಗೆ ದೊರೆತಿರುವ ಜಯ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.