
ಬೆಂಗಳೂರು: ಕಳೆದ 20 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏಕಾಏಕಿ ಹೆಚ್ಚಳ ಕಂಡುಬಂದಿದ್ದು ಆರೋಗ್ಯ ಇಲಾಖೆಯು ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹೊಸದಾಗಿ ಕೋವಿಡ್-19 ಮಾರ್ಗಸೂಚಿ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಒಟ್ಟು 35 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 32 ಬೆಂಗಳೂರಿನಲ್ಲಿ ದೃಢಪಟ್ಟಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದರೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
- ಗರ್ಭಿಣಿಯರು, ಮಕ್ಕಳು, ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಫೇಸ್ ಮಾಸ್ಕ್ ಧರಿಸಿ ಓಡಾಡಲು ಸೂಚನೆ ನೀಡಲಾಗಿದೆ.
- ಸಾರ್ವಜನಿಕರು ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮತ್ತು ನಿಯಮಿತವಾಗಿ ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಬಳಸಲು ಸಲಹೆ ನೀಡಲಾಗಿದೆ.
- ತೀವ್ರ ಉಸಿರಾಟದ ಕಾಯಿಲೆಯ ಲಕ್ಷಣಗಳನ್ನು ಹೊಂದಿರುವವರು ಸಕಾಲಿಕವಾಗಿ ಚಿಕಿತ್ಸೆಯನ್ನು ಪಡೆಯಬೇಕು.
- ಸಂಭಾವ್ಯ ಅಪಾಯ ತಡೆಗಟ್ಟಲು ಕೋವಿಡ್ -19 ಪರೀಕ್ಷೆಯನ್ನು ತಕ್ಷಣವೇ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.






















































