31.6 C
Udupi
Thursday, March 5, 2026
spot_img
spot_img
HomeBlogಕರಾವಳಿಗರ ಬದುಕನ್ನು ಸಂಕಷ್ಟಕ್ಕೆ ದೂಡಿದ ಸರ್ಕಾರ

ಕರಾವಳಿಗರ ಬದುಕನ್ನು ಸಂಕಷ್ಟಕ್ಕೆ ದೂಡಿದ ಸರ್ಕಾರ

ಮರಳು-ಕಲ್ಲು ಸಮಸ್ಯೆಗೆ ಸಿಎಂ ಮೌನ: ದ್ವೇಷದ ರಾಜಕಾರಣಕ್ಕೆ ಕರಾವಳಿ ಬಲಿ

ಶಾಸಕ ವಿ.ಸುನಿಲ್ ಕುಮಾರ್ ಆಕ್ರೋಶ


ರಾಜ್ಯದ ಕಾಂಗ್ರೆಸ್ ಸರ್ಕಾರವು ಕರಾವಳಿ ಭಾಗದ ಮೇಲೆ ಸವಾರಿ ಮಾಡುತ್ತಿದ್ದು, ಮರಳು ಮತ್ತು ಕೆಂಪುಕಲ್ಲು, ಮಣ್ಣು ಸಾಗಾಟದಂತಹ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸದೆ ಈ ಭಾಗದ ಬಡ ಕಾರ್ಮಿಕರ ಮತ್ತು ಉದ್ಯಮಿಗಳ ಬದುಕನ್ನು ಬೀದಿಗೆ ತಳ್ಳಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.


ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿದ ಅವರು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕರಾವಳಿಯ ಜೀವನಾಡಿಯಾಗಿರುವ ಮರಳುಗಾರಿಕೆ ಮತ್ತು ಕೆಂಪುಕಲ್ಲು ಸಾಗಾಟದ ಸಮಸ್ಯೆಯಿಂದಾಗಿ ಇಂದು ಸಾವಿರಾರು ಲಾರಿ ಮಾಲೀಕರು, ಚಾಲಕರು, ಕೂಲಿ ಕಾರ್ಮಿಕರು ಮತ್ತು ಹೋಟೆಲ್ ಉದ್ಯಮಿಗಳು ಸಂಕಷ್ಟದಲ್ಲಿದ್ದಾರೆ. “ಮುಖ್ಯಮಂತ್ರಿಗಳ ಮುಂದೆ ಈ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರೂ, ಅವರು ಮೌನ ವಹಿಸಿರುವುದು ಕರಾವಳಿ ಜನರ ಬದುಕಿನ ಬಗ್ಗೆ ಅವರಿಗಿರುವ ತಾತ್ಸಾರವನ್ನು ತೋರಿಸುತ್ತದೆ,” ಎಂದು ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಕರಾವಳಿಯ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರೇ ಇದ್ದಾರೆ” ಎಂದು ಸರ್ಕಾರದ ಮಲತಾಯಿ ಧೋರಣೆಯನ್ನು ಸ್ವತ: ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಸಿಎಂ ಭಾಗವಹಿಸಿದ್ದ ವೇದಿಕೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ನೀಡಬಾರದು ಎಂಬ ದ್ವೇಷದ ರಾಜಕಾರಣದಿಂದಾಗಿ ಕಾರ್ಕಳ ಸೇರಿದಂತೆ ಕರಾವಳಿಯ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅವರು ದೂರಿದರು. ಸಾಂಪ್ರಾದಾಯಿಕ ಕಲೆಯಾದ ಕಂಬಳ,ಯಕ್ಷಗಾನ ಇತ್ಯಾದಿಗಳಿಗೆ ಸರಕಾರ ಅಡ್ಡಿಪಡಿಸಿದೆ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ಅವರು, ಕರಾವಳಿಯ ಯಾವುದೇ ಹೊಸ ಯೋಜನೆಗೆ ಚಾಲನೆ ನೀಡುತಿಲ್ಲ. ಅಂಬೇಡ್ಕರ್ ಭವನದಂತಹ ದಲಿತ ಪರ ಕೆಲಸಗಳಿಗೂ ಅನುದಾನ ನೀಡದೆ ಬರಿಗೈಲಿ ವಾಪಸ್ಸಾಗಿದ್ದಾರೆ. ಮಹಾಮಸ್ತಕಾಭಿಷೇಕದಂತಹ ಪವಿತ್ರ ಕಾರ್ಯಕ್ರಮಕ್ಕೂ ಕೇವಲ ‘ಬಾಯಿಮಾತಿನ’ ಸಹಕಾರ ನೀಡಿರುವುದು ಈ ಭಾಗದ ಸಾಂಸ್ಕೃತಿಕ ಪರಂಪರೆಗೆ ಮಾಡಿದ ಅವಮಾನವಾಗಿದೆ.
ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ಮಾತನಾಡದೆ, ಮುಖ್ಯಮಂತ್ರಿಗಳು ಕೇವಲ ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಭಜನೆ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದ ಸರ್ಕಾರ, ಕರಾವಳಿಯ ಸಂಪನ್ಮೂಲಗಳನ್ನು ಹತ್ತಿಕ್ಕುವ ಮೂಲಕ ಜನರನ್ನು ಆರ್ಥಿಕವಾಗಿ ಹೈರಾಣಾಗಿಸುತ್ತಿದೆ ಎಂದು ಶಾಸಕರು ಕಿಡಿಕಾರಿದರು.


“ಮರಳು ಸಿಗುತ್ತಿಲ್ಲ, ಕಲ್ಲು ಸಾಗಾಟಕ್ಕೆ ಅವಕಾಶವಿಲ್ಲ, ಅಭಿವೃದ್ಧಿಗೆ ಅನುದಾನವಿಲ್ಲ. ಇದು ಸಿದ್ದರಾಮಯ್ಯ ಸರ್ಕಾರದ ಕರಾವಳಿ ಕೊಡುಗೆಯೋ ಅಥವಾ ದ್ವೇಷದ ಸಾಧನೆಯೋ? ಎಙದು ಪ್ರಶ್ನಿಸಿದ ಅವರು ಅದಿವೇಶನದಲ್ಲಿ ಸದನದೊಳಗೆ ಕರಾವಳಿಯ ಎಲ್ಲ ಶಾಸಕರು ಅವಿಭಜಿತ ಜಿಲ್ಲೆಗೆ ಆದ ಅನ್ಯಾಯದ ವಿರುದ್ಧ ಪ್ರತಿಭಟಿಸಲಿದ್ದೇವೆ ಎಂದು ಹೇಳಿದರು. ವೇದಿಕೆಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್‌ ಶೆಟ್ಟಿ, ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ, ಸುರೇಶ್‌ ಶೆಟ್ಟಿ, ಪ್ರಮುಖರಾದ ಜಯರಾಮ ಸಾಲ್ಯಾನ್, ರವೀಂದ್ರ ಮಡಿವಾಳ, ಸುಧಾಕರ್‌ ಹೆಗ್ಡೆ ಹೆಬ್ರಿ ಮತ್ತು ಕ್ಷೇತ್ರದ ಗ್ರಾಮ ಪಂಚಾಯತು ಸದಸ್ಯರು, ಮುಖಂಡರು, ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page