
ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ LPG ಸಿಲಿಂಡರ್ಗಳ ಕೊರತೆಯಿಂದ ಹೋಟೆಲ್ ಉದ್ಯಮ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ. ಹಲವು ರೆಸ್ಟೋರೆಂಟ್ಗಳು ಈಗಾಗಲೇ ಬಂದ್ ಆಗಿದ್ದು, ಈ ಕ್ಷೇತ್ರವನ್ನು ಅವಲಂಬಿಸಿದ್ದ ಸಾವಿರಾರು ಕಾರ್ಮಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸಮಸ್ಯೆ ಪರಿಹಾರಕ್ಕಾಗಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು
ಇದರ ನಡುವೆ ಅಸೋಸಿಯೇಷನ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ವಾಣಿಜ್ಯ LPG ಸರಬರಾಜು ಸಂಪೂರ್ಣವಾಗಿ ವ್ಯತ್ಯಯಗೊಂಡಿರುವುದರಿಂದ ಉಂಟಾದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಯ ನೀಡುವಂತೆ ಮನವಿ ಮಾಡಲಾಗಿದೆ.
ಬೆಂಗಳೂರು ನಗರದಲ್ಲೇ ಸುಮಾರು 40,000ಕ್ಕೂ ಹೆಚ್ಚು ಹೋಟೆಲ್ಗಳು ಕಾರ್ಯನಿರ್ವಹಿಸುತ್ತಿದ್ದು, ಆದರೆ LPG ಕೊರತೆಯಿಂದ ಕಾರ್ಯಾಚರಣೆ ಕಷ್ಟಕರವಾಗಿದ್ದು, ಕನಿಷ್ಠ ಶೇ.50ರಷ್ಟು ಸರಬರಾಜು ಖಚಿತಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂಕಷ್ಟದಿಂದ ಸುಮಾರು 6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದ್ದು, ಹೋಟೆಲ್ಗಳಿಗೆ ಸಂಬಂಧಿಸಿದ ಹಾಲು, ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳ ಬಳಕೆಯ ಮೇಲೂ ಹೊಡೆತ ಬಿದ್ದಿದೆ. ಹೀಗಾಗಿ ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು ಎಂದು ಅಸೋಸಿಯೇಷನ್ ಆಗ್ರಹಿಸಿದೆ.





















































