ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡಿದ್ದು ಕನ್ನಡ ಬರೊಲ್ಲ ಅನ್ನೋ ವಿಚಾರವಾಗಿ ನೀವೇಷ್ಟೇ ಟ್ರೋಲ್ ಮಾಡಿದ್ರೂ ನಾನು ಹೆದರೊಲ್ಲ. ಸುಮ್ಮನೆ ಇಲ್ಲದೆ ಇರೋದು ತರಬೇಡಿ. ಪದೇ ಪದೇ ಇದನ್ನ ತರೋದು ಮಾಧ್ಯಮಗಳು ನಿಲ್ಲಿಸಬೇಕು. ಮಕ್ಕಳಿಗೆ ಮೊಟ್ಟೆ ಕೊಟ್ಟಿರೋ ವಿಚಾರ ಹೇಳೊಲ್ಲ. ಆದರೆ ಶಿಕ್ಷಣ ಸಚಿವರಿಗೆ ಕನ್ನಡ ಬರೊಲ್ಲ ಅನ್ನೋದನ್ನ ಹಾಕ್ತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನ್ಫರೆನ್ಸ್ ಸಂವಾದದಲ್ಲಿ ವಿದ್ಯಾರ್ಥಿಯೊಬ್ಬ ‘ಸಚಿವರಿಗೆ ಕನ್ನಡ ಬರೊಲ್ಲ’ ಎಂದು ಅಪಹಾಸ್ಯ ಮಾಡಿದ್ದ ವಿದ್ಯಾರ್ಥಿ ಮೇಲೆ ಕೆರಳಿ ಕೆಂಡವಾಗಿ ಕ್ರಮಕ್ಕೆ ಸೂಚಿಸಿದ್ದಾರೆ ಎನ್ನಲಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿದ್ಯಾರ್ಥಿ ವಿರುದ್ದ ಕ್ರಮ ತೆಗೆದುಕೊಳ್ಳಿ ಅಂತ ನಾನು ಹೇಳಿಲ್ಲ. ಹೆಡ್ ಮಾಸ್ಟರ್,ಬಿಇಒ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದೆ. ಮಕ್ಕಳ ಮೇಲೆ ಆಕ್ಷನ್ ತಗೊಳ್ಳೋಕೆ ನಮಗೆ ಅಧಿಕಾರ ಇಲ್ಲ. ನಿಮ್ಮ ಮಕ್ಕಳನ್ನ ಹತೋಟಿಯಲ್ಲಿ ಇಡಬೇಕು ಅಂತಾ ಹೆಡ್ ಮಾಸ್ಟರ್, ಬಿಇಒಗೆ ಸೂಚನೆ ನೀಡಿದ್ದೇನೆ. ನಾನು ಶಿಕ್ಷಣ ಸಚಿವ ನಾನು ಹೇಳಿದ್ದೇನೆ. ನಿಮ್ಮ ಮಗ ಹಾಗೆ ಮಾತಾಡಿದ್ರೆ ನೀವು ಏನ್ ಮಾಡ್ತಿದ್ರಿ? ನಾನಾಗಿದ್ರೆ ನನ್ನ ಮಗನ ಜೊತೆ ಮಾತಾಡುತ್ತಿದ್ದೆ. 60-70 ಸಾವಿರ ಮಕ್ಕಳು ಇದ್ದಾಗ ಮಕ್ಕಳು ಆ ರೀತಿ ಮಾತಾಡೋದು ಸರಿಯಲ್ಲ. ಶಾಲೆಯಲ್ಲಿ ಡಿಸಿಪ್ಲೀನ್ ತರೋಕೆ ಆಗುತ್ತಾ ಹೀಗೆ ಮಾತಾಡಿದ್ರೆ? ಸಚಿವನಾಗಿ ಅಲ್ಲ, ನಾನೊಬ್ಬ ತಂದೆಯಾಗಿ ಇದನ್ನ ಹೇಳುತ್ತಿದ್ದೇನೆ ಎಂದು ಹೇಳಿದರು.