
ಬೆಂಗಳೂರು: ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ನಿರ್ವಾಹಕನ ಮೇಲೆ ಹಲ್ಲೆ ನಡೆದ ಪ್ರಕರಣವು ಇದೀಗ ಹೊಸ ತಿರುವ ಪಡೆದುಕೊಂಡಿದ್ದು ಅದೇನೆಂದರೆ ಬಸ್‌ನಲ್ಲೇ ಕೆಟ್ಟ ದೃಷ್ಟಿಯಿಂದ ನೋಡಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ನಿರ್ವಾಹಕ ಮಹಾದೇವ್ ಹುಕ್ಕೇರಿ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.
ಬೆಳಗಾವಿ-ಸುಳೇಬಾವಿ ಮಾರ್ಗಮಧ್ಯೆ ಸಂಚರಿಸುವ ಬಸ್‌ನಲ್ಲಿ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೆ ಗಲಾಟೆ ನಡೆದಿತ್ತು. ಸುದ್ದಿಗಾರರ ಜೊತೆ ಮಾತನಾಡಿದ್ದ ಮಹಾದೇವ್, ಬಿಕೆ ಬಾಳೇಕುಂದ್ರಿಗೆ ಸಿಬಿಟಿಯಿಂದ ಯುವಕ ಮತ್ತು ಯುವತಿ ಬಸ್ ಹತ್ತಿದ್ದರು. ಯುವತಿ ಎರಡು ಫ್ರೀ ಟಿಕೆಟ್ ಎಂದು ಹೇಳಿ ಟಿಕೆಟ್ ಪಡೆದಳು. ಯುವಕ ಟಿಕೆಟ್ ಪಡೆದಿರಲಿಲ್ಲ. ಈ ವಿಚಾರಕ್ಕೆ ನಾನು ಪ್ರಶ್ನೆ ಮಾಡಿದ್ದೆ. ನೀವು ಟಿಕೆಟ್ ಪಡೆಯುವಾಗ ಸರಿಯಾಗಿ ಹೇಳಿ ತೆಗೆದುಕೊಳ್ಳಬೇಕು ಎಂದು ಆಕೆಗೆ ತಿಳಿ ಹೇಳಿದ್ದೆ. ಈ ಸಂದರ್ಭದಲ್ಲಿ ಆಕೆ ಮರಾಠಿಯಲ್ಲಿ ಮಾತಾಡು, ಮರಾಠಿ ಕಲಿತುಕೊಳ್ಳಬೇಕು ಎಂದು ನನಗೆ ಮರಾಠಿಯಲ್ಲೇ ಬೈದಳು. ಮುಂದೆ ಬಾಳೇಕುಂದ್ರಿ ಕೆಎಚ್ ಬರುತ್ತಿದ್ದಂತೆ ಅವರ ಕಡೆಯ 20 ಜನರು ನನ್ನ ಮೇಲೆ ಹಲ್ಲೆ ಮಾಡಲು ಬಂದರು ಎಂದು ತಿಳಿಸಿದ್ದರು.
ನಿರ್ವಾಹಕ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಇಂದು ನಸುಕಿನ ಜಾವ 2:30ರ ವೇಳೆಗೆ ಬಾಲಕಿಯಿಂದ ದೂರು ದಾಖಲಾಗಿದೆ. ಪೋಕ್ಸೋ ಬಗ್ಗೆ ಶುಕ್ರವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಎಲ್ಲೂ ಪ್ರಸ್ತಾಪವೇ ಆಗಿಲ್ಲ. ಆದರೆ ಇದ್ದಕ್ಕಿದ್ದಂತೆ ಪ್ರಕರಣ ದಾಖಲಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ನಿರ್ವಾಹಕ ಮಹಾದೇವ್ ಅವರು, ನನಗೆ ದೂರು ನೀಡಿದ ಹುಡುಗಿಯಷ್ಟು ಪ್ರಾಯದ ಮಗಳಿದ್ದಾಳೆ. ಪ್ರಕರಣದ ದಿಕ್ಕು ತಪ್ಪಿಸಲು ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.