
ಉಡುಪಿ ಜಿಲ್ಲೆ ಕಾರ್ಕಳ ವಿಧಾನಸಭಾ ಕ್ಷೇತ್ರವು ಜೈನ ಸಮುದಾಯದ ಐತಿಹಾಸಿಕ ಹೆಗ್ಗುರುತುಗಳಾದ ಕಾರ್ಕಳ ಶ್ರೀ ಗೊಮ್ಮಟೇಶ್ವರ ಏಕಶಿಲಾ ಪ್ರತಿಮೆ, ಚತುರ್ಮುಖ ಬಸದಿ, ಆನೆಕೆರೆ ಚತುರ್ಮುಖ ಕೆರೆ ಬಸದಿ, ವರಂಗ ಚತುರ್ಮುಖ ಕೆರೆ ಬಸದಿ, ನಲ್ಲೂರು ಶ್ರೀ ಕೂಷ್ಮಾಂಡಿನಿ ಜೈನ ಬಸದಿಯಂತಹ ಜೈನ ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಹತ್ತು ಹಲವು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ. ಧಾರ್ಮಿಕ ನಂಬಿಕೆಗಳ ಜೊತೆಗೆ ಆಕರ್ಷಣೀಯ ಪ್ರಾಕೃತಿಕ ಸೌಂದರ್ಯದಿಂದಾಗಿ ನಮ್ಮ ಹಲವು ಜೈನ ಬಸದಿಗಳು ವರ್ಷಪೂರ್ತಿ ಯಾತ್ರಾರ್ಥಿಗಳನ್ನು, ಭಕ್ತರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮುಂದಿನ ವರ್ಷ 2027 ಜನವರಿಯಲ್ಲಿ 12 ವರ್ಷಗಳಿಗೆ ಒಮ್ಮೆ ನಡೆಯುವ ವಿಶ್ವ ವಿಖ್ಯಾತ, ಐತಿಹಾಸಿಕ ಶ್ರೀ ಗೊಮ್ಮಟೇಶ್ವರ ಸ್ವಾಮಿಯ ಮಹಾ ಮಸ್ತಕಾಭಿಷೇಕ ನಡೆಯಲಿರುವುದರಿಂದ ದೇಶ ವಿದೇಶಗಳಿಂದ ಆನೇಕ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಆಗಮಿಸಲಿದ್ದಾರೆ.
ಐತಿಹಾಸಿಕ ಮಹಾ ಮಸ್ತಕಾಭೀಷೇಕ ಮಹೋತ್ಸವ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸುವ ಹಿನ್ನಲೆಯಲ್ಲಿ ಕಾರ್ಕಳ ನಗರವನ್ನು ಸಂಪರ್ಕಿಸುವ ಮುಖ್ಯರಸ್ತೆಗಳು, ನಗರದ ಎಲ್ಲಾ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆ ಸೇರಿದಂತೆ ದೇಶ ವಿದೇಶಗಳಿಂದ ಆಗಮಿಸುವ ಯಾತ್ರಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾತ್ರಿ ನಿವಾಸ, ಅನ್ನ ಛತ್ರಗಳನ್ನು ಒಳಗೊಂಡ ಸುಸಜ್ಜಿತ ಸಭಾಭವನಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಲಾಗಿದೆ.
ಮಹಾ ಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳು, ಭಕ್ತರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಸುಸ್ಸಜ್ಜಿತ ಅನ್ನ ಛತ್ರ ಸಹಿತ ಸಭಾ ಭವನ ನಿರ್ಮಾಣ ಮಾಡುವುದು ಅತೀ ಅವಶ್ಯಕವಾಗಿರುವ ಕಾರಣ ಕಾರ್ಕಳ ಗೊಮ್ಮಟ ಬೆಟ್ಟದ ಬಳಿ ಮತ್ತು ನಲ್ಲೂರು ಕೂಷ್ಮಾಂಡಿನಿ ಜೈನ ಬಸದಿ ಬಳಿ ಮತ್ತು ವರಂಗ ಜೈನ ಬಸದಿ ಬಳಿ ಸಭಾ ಭವನಗಳ ನಿರ್ಮಾಣಕ್ಕೆ ಈಗಾಗಲೇ ಅನುದಾನ ಬಿಡುಗಡೆಗಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಅನುದಾನ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಹಂತದಲ್ಲಿರುತ್ತದೆ. ಈ ಮೂಲಕ ಕಾರ್ಕಳ ಮಹಾಮಸ್ತಕಾಭಿಷೇಕ ಪೂರ್ವಭಾವಿ ತಯಾರಿಗಳು ಆರಂಭಗೊಂಡಿವೆ.





