
ಬೆಂಗಳೂರು: ದಿನದಿಂದ ದಿನಕ್ಕೆ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಆಗುತ್ತಿದ್ದು ಇದೀಗ ಏಪ್ರಿಲ್ ತಿಂಗಳಿಂದ ಹೊಸ ವಾಹನಗಳ ಬೆಲೆ ಪ್ರತಿ ವಾಹನದ ಮೇಲೆ ಶೇ.4ರಷ್ಟು ದರ ಏರಿಕೆಯಾಗಲಿದ್ದು, ತಯಾರಿಕಾ ಕಂಪನಿಗಳು ಹೊಸ ವಾಹನಗಳ ದರ ಏರಿಕೆ ಬಗ್ಗೆ ಮಾಹಿತಿ ನೀಡಿವೆ.
ಎಲ್ಲಾ ವಾಹನ ತಯಾರಿಕಾ ಕಂಪನಿಗಳು ದರ ಏರಿಕೆ ಮಾಡಲು ತೀರ್ಮಾನ ಮಾಡಿದ್ದು ಉಕ್ಕಿನ ದರ ಹೆಚ್ಚಳ, ವಿದೇಶಿ ಅಮದು, ತಯಾರಿಕಾ ವೆಚ್ಚ ಹೆಚ್ಚಳವೇ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಇದೇ ಏಪ್ರಿಲ್‌ನಿಂದಲೇ ಕಾರು, ಬೈಕ್, ಆಟೋ ದರ 4%ರಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು 2 ವೀಲರ್ ಮೇಲೆ 2% ನಷ್ಟು, ಕಾರಿನ ಮೇಲೆ 4%ರಷ್ಟು ದರ ಏರಿಕೆಯಾಗಲಿದೆ. ಒಂದು ಲಕ್ಷ ರೂ. 2 ವೀಲರ್ ಖರೀದಿ ಮಾಡಿದರೆ 2 ರಿಂದ 3 ಸಾವಿರ, ಎರಡು ಲಕ್ಷ ರೂ. ಮೌಲ್ಯದ ವಾಹನ ಖರೀದಿ ಮಾಡಿದರೆ 5 ರಿಂದ 6 ಸಾವಿರ, ಇನ್ನೂ ಐದು ಲಕ್ಷ ರೂ. ಇರುವ ಎಕ್ಸ್ ಷೋ ರೂಂ ಕಾರಿನ ಮೇಲೆ 15 ರಿಂದ 20 ಸಾವಿರ, 10 ಲಕ್ಷ ರೂ. ಮೌಲ್ಯದ ಕಾರು ಖರೀದಿ ಮಾಡಿದರೆ 30 ರಿಂದ 40 ಸಾವಿರ ರೂ.ವರೆಗೆ ಏರಿಕೆಯಾಗಲಿದೆ.
ಇದು ಕೇವಲ ಕೆಲ ಕಾರುಗಳಿಗೆ ಮಾತ್ರ ಸೀಮಿತ ಅಲ್ಲ. ಸಾಮಾನ್ಯ ಮಧ್ಯಮ ವರ್ಗ ಬಳಸುವ ಕಾರಿನಿಂದ ಹಿಡಿದು ಕೋಟಿ ಬೆಲೆಯ ಕಾರಿನವರೆಗೂ ಅನುಗುಣವಾಗಿ ದರ ಏರಿಕೆಯಾಗಲಿದೆ. ಇದು ಹೆಚ್ಚಾಗಿ ಕಾರು, ಆಟೋ ನಂಬಿ ಜೀವನ ಸಾಗಿಸುವ ಚಾಲಕರ ಮೇಲೆ ಹೆಚ್ಚು ಹೊರೆಯಾಗುವ ಸಾಧ್ಯತೆಯಿದ್ದು ಜೊತೆಗೆ ಕನಸಿನ ಕಾರು ಖರೀದಿ ಮಾಡಬೇಕು ಎಂಬ ಮಧ್ಯಮ ವರ್ಗದ ಜನರ ಕನಸಿಗೆ ಹೊಡೆತ ಬಿದ್ದಿದೆ.