
ಬೆಂಗಳೂರು: ರಾಜ್ಯ ಖಾಸಗಿ ಶಾಲೆಗಳು ಎಸ್‌ಎಸ್‌ಎಲ್‌ಸಿ ಉತ್ತೀರ್ಣಕ್ಕೆ ಕನಿಷ್ಠ 35 ಅಂಕದ ಬದಲು 33ಕ್ಕೆ ಇಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.
ಸಿಬಿಎಸ್‌ಸಿ, ಐಸಿಎಸ್‌ಸಿ ಪಠ್ಯಕ್ರಮದಲ್ಲಿ ಪಾಸ್ ಅಂಕ 33 ಇದೆ. ಇದೇ ಮಾದರಿಯಲ್ಲಿ ರಾಜ್ಯ ಪಠ್ಯಕ್ರಮ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ 33 ಅಂಕಗಳಿಗೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ಹೇಳಿದೆ.
ಈಗಾಗಲೇ 33 ಅಂಕದ ಮಾದರಿ ಜಾರಿಗೆ ಶಿಕ್ಷಣ ಇಲಾಖೆಯ ಜೊತೆ ಖಾಸಗಿ ಶಾಲೆಗಳು ಸಭೆ ಮಾಡಿದ್ದವು. ಆದರೆ ಈವರೆಗೂ ಶಿಕ್ಷಣ ಇಲಾಖೆ ಈ ಪ್ರಸ್ತಾಪವನ್ನು ಪರಿಗಣನೆ ಮಾಡಿರಲಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಮಾಡಿದೆ. ಅಂಕ ಕಡಿತದ ಬಗ್ಗೆ ನಿರ್ಧಾರ ಮಾಡುವಂತೆ ಸಭಾಪತಿ ಬಸವರಾಜ್ ಹೊರಟ್ಟಿ ಸಹ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ.
ಕೇಂದ್ರದ ಪಠ್ಯ ಕ್ರಮದ ಶಾಲೆಗಳಲ್ಲಿ 33 ಪಾಸ್ ಅಂಕ ಇದ್ದು ರಾಜ್ಯ ಪಠ್ಯದಲ್ಲಿ 35 ಅಂಕ ಇರುವುದು ತಾರತಮ್ಯ ಮಾಡಿದಂತೆ ಆಗುತ್ತದೆ. ರಾಜ್ಯಪಠ್ಯ ಕ್ರಮದಲ್ಲಿ 20 ಇಂಟರ್ನಲ್ ಅಸೆಸ್ಮೆಂಟ್ ಅಂಕಗಳಲ್ಲಿ ಸಂಪೂರ್ಣ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ತಾರತಮ್ಯದಿಂದ ಕೇಂದ್ರ ಬೋರ್ಡ್‌ಗಳಲ್ಲಿ ಫಲಿತಾಂಶ ಜಾಸ್ತಿ ಆಗುತ್ತಿದೆ. ಪೋಷಕರು ಕೇಂದ್ರ ಬೋರ್ಡ್ ಇರುವ ಶಾಲೆಗೆ ಮಕ್ಕಳನ್ನ ಸೇರಿಸುತ್ತಿದ್ದಾರೆ. ಹೀಗೆ ಆದರೆ ರಾಜ್ಯಪಠ್ಯ ಕ್ರಮದ ಶಾಲೆಗಳಿಗೆ ಕನ್ನಡಕ್ಕೆ ಅನ್ಯಾಯ ಆಗಲಿದೆ. ಹೀಗಾಗಿ ಕೇಂದ್ರ ಬೋರ್ಡ್ ಮಾದರಿಯಲ್ಲೇ SSLC ಪಾಸ್ ಅಂಕ 33ಕ್ಕೆ ಇಳಿಸಬೇಕು ಎಂದು ಖಾಸಗಿ ಶಾಲೆಗಳು ಒತ್ತಾಯಿಸಿದೆ.